ಮೀರತ್ : ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಾಜಿ ನೌಕಾಪಡೆ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣದಲ್ಲಿ ಮೀರತ್ನ ಸ್ಥಳೀಯ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮೃತರ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ದೋಷಿಗಳು ಎಂದು ಎರಡು ವಾರಗಳ ಹಿಂದೆ ಘೋಷಿಸಲಾಗಿದ್ದು, ವಿಚಾರಣೆ ಪೂರ್ಣಗೊಳಿಸಿ ಬುಧವಾರ ಇಬ್ಬರಿಗೂ ಮರಣದಂಡನೆ ವಿಧಿಸಿ ಜಿಲ್ಲಾ ನ್ಯಾಯಾಧೀಶ ಅರವಿಂದ್ ಕುಮಾರ್ ಮಿಶ್ರಾ ಆದೇಶ ಹೊರಡಿಸಿದ್ದಾರೆ.
ಕೇವಲ 126 ವಿಚಾರಣೆಗಳು ಹಾಗೂ 22 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಮುಸ್ಕಾನ್ ಹಾಗೂ ಸಾಹಿಲ್ ಇಬ್ಬರೂ ಸೇರಿ ಸೌರಭ್ ರಜಪೂತ್ ಅವರನ್ನು ವ್ಯವಸ್ಥಿತವಾಗಿ ಕೊಲೆಗೈದು, ಅವರ ಛಿದ್ರಗೊಂಡ ದೇಹದ ತುಂಡುಗಳನ್ನು ನೀಲಿ ಬಣ್ಣದ ಕೈಗಾರಿಕಾ ಡ್ರಮ್ನಲ್ಲಿ ಹಾಕಿ, ಕಾಂಕ್ರೀಟ್, ಮರಳು ಮತ್ತು ಸಿಮೆಂಟ್ನಿಂದ ಮುಚ್ಚಿ ಮರೆಮಾಚಿದ್ದರು. ಇಂತಹ ಕೃತ್ಯಗಳು ಸಮಾಜದಲ್ಲಿ ಭೀತಿಯನ್ನುಂಟುಮಾಡುತ್ತವೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ, ಮುಸ್ಕಾನ್ ಪೋಷಕರೇ ಸೌರಭ್ “ತುಂಬಾ ಒಳ್ಳೆಯ ವ್ಯಕ್ತಿ” ಎಂದು ಬಣ್ಣಿಸಿ, ತಪ್ಪಿತಸ್ಥರಿಗೆ ಮರಣದಂಡನೆ ನೀಡಿದರೆ ತಾವು ಪ್ರತಿಭಟಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಮುಸ್ಕಾನ್ ಕುಟುಂಬವು ಜೈಲಿನಲ್ಲಿಯೂ ಆಕೆಯನ್ನು ಭೇಟಿಯಾಗಿರಲಿಲ್ಲ. ಪ್ರಾಸೂಷನ್ ವರದಿ ಪ್ರಕಾರ, ಮಾರ್ಚ್ 3, 2025 ರಂದು ಮುಸ್ಕಾನ್ ರಸ್ತೋಗಿ ತನ್ನ ಪತಿ ಸೌರಭ್ ಅವರಿಗೆ ಇಂದಿರಾ ನಗರದ ಮನೆಯಲ್ಲಿ ನೀಡಿದ ಆಹಾರದಲ್ಲಿ ನಿದ್ರಾಜನಕ ಮಾತ್ರೆ ಬೆರೆಸಿ ಅರೆನಿದ್ರಾವಸ್ಥೆಗೆ ಜಾರುವಂತೆ ಮಾಡಿದ್ದರು. ಸ್ವಲ್ಪ ಸಮಯದಲ್ಲೇ ಅಲ್ಲಿಗೆ ಆಗಮಿಸಿದ ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಸೌರಭ್ ಅವರನ್ನು ಇರಿದು ಕೊಲೆ ಮಾಡಿದ್ದರು. ಬಳಿಕ ಸ್ನಾನಗೃಹದಲ್ಲಿ ಶವವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು.
ಶವ ಕೊಳೆಯುವ ವಾಸನೆ ಹೊರಬರದಂತೆ ತಡೆಯಲು, ದೇಹದ ಭಾಗಗಳನ್ನು ದೊಡ್ಡ ನೀಲಿ ಪ್ಲಾಸ್ಟಿಕ್ ಡ್ರಮ್ಗೆ ಹಾಕಿ, ಹೊಸದಾಗಿ ಬೆರೆಸಿದ ಒದ್ದೆಯಾದ ಸಿಮೆಂಟ್ ಹಾಗೂ ಮರಳಿನ ಮಿಕ್ಸ್ ಮಾಡಿ ಮುಚ್ಚಿದ್ದರು. ಮರುದಿನವೇ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪರಾರಿಯಾಗಿದ್ದರು. ಸೌರಭ್ ಅವರ ಮೊಬೈಲ್ ಬಳಸಿ ಅವರು ಜೀವಂತವಾಗಿದ್ದಾರೆ ಹಾಗೂ ವ್ಯವಹಾರ ನಿಮಿತ್ತ ಹೊರಗಿದ್ದಾರೆ ಎಂದು ಕುಟುಂಬಸ್ಥರಿಗೆ ನಕಲಿ ಸಂದೇಶಗಳನ್ನು ಕಳುಹಿಸಿ ವಂಚಿಸಿದ್ದರು.
ಮಾರ್ಚ್ 17, 2025 ರಂದು ಅನುಮಾನಗೊಂಡ ಸಂಬಂಧಿಕರು ಸ್ಥಳೀಯ ಅಧಿಕಾರಿಗಳೊಂದಿಗೆ ಮನೆಗೆ ಭೇಟಿ ನೀಡಿದಾಗ ಈ ಘೋರ ರಹಸ್ಯ ಬಯಲಾಗಿದೆ. ಸೌರಭ್ ಮತ್ತು ಮುಸ್ಕಾನ್ ದಂಪತಿಯ 6 ವರ್ಷದ ಪುತ್ರಿ, ನೆರೆಹೊರೆಯವರಿಗೆ ಮುಗ್ಧವಾಗಿ “ಅಪ್ಪ ಡ್ರಮ್ನಲ್ಲಿದ್ದಾರೆ” ಎಂದು ಹೇಳಿದ್ದಳು. ಈ ಸುಳಿವಿನ ಮೇರೆಗೆ ಪೊಲೀಸರು ಒಳಗೆ ಮುಚ್ಚಿದ್ದ ನೀಲಿ ಡ್ರಮ್ ಅನ್ನು ಕತ್ತರಿಸಿ ಪರಿಶೀಲಿಸಿದಾಗ ಸೌರಭ್ ಅವರ ಅವಶೇಷಗಳು ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ಮುಸ್ಕಾನ್ ಹಾಗೂ ಸಾಹಿಲ್ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರು ಅಂಗಡಿಯವರಿಂದ ಡ್ರಮ್, ಸಿಮೆಂಟ್, ಮರಳು ಖರೀದಿಸಿದ ರಶೀದಿಗಳು, ಕಾಲ್ ಡಿಟೇಲ್ ರೆಕಾರ್ಡ್ಸ್ (CDR) ಹಾಗೂ ಮೊಬೈಲ್ ಟವರ್ ಲೊಕೇಷನ್ನಂತಹ ಬಲವಾದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲೂ ಇಬ್ಬರೂ ಸೇರಿ ಚೂರಿಯಿಂದ ಇರಿದು ಹತ್ಯೆ ಮಾಡಿರುವುದು ವೈಜ್ಞಾನಿಕವಾಗಿ ದೃಢಪಟ್ಟಿತ್ತು.








