ಆನೇಕಲ್: ಗ್ಯಾಸ್ಸಿಲಿಂಡರ್ ಸ್ಫೋಟದಿಂದಾಗ 6 ಜನರಿಗೆ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನ ಶ್ರೀಸಾಯಿ ಲೇಔಟ್ನಲ್ಲಿ ಘಟನೆ ನಡೆದಿದೆ. ಸದ್ಯ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರು ಜನರಿಗೆ ಗಾಯ
ಮಧ್ಯಪ್ರದೇಶದ ಕಾರ್ಮಿಕರಾದ ಧೀರು, ವಿಜಯ್, ಕೋಬಿನ್, ಪಶ್ಚಿಮ ಬಂಗಾಳದ ಸಂಜಯ್, ಬೋರೋ ಸೇರಿ 6 ಜನರಿಗೆ ಗಾಯಗಳಾಗಿವೆ. ಗಾಯಾಳುಗಳ ಕೂಗಾಟ ಕೇಳಿ ನೆರೆಹೊರೆಯವರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಇವರೆಲ್ಲರೂ ಕಟ್ಟಡ ಕಾರ್ಮಿಕರು. ಸದ್ಯ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ನಡೆದಿದ್ದೇನು?
ಮಂಜುನಾಥ ಎಂಬುವರ ಮನೆಯಲ್ಲಿ ಉತ್ತರ ಭಾರತದವರಾದ ಕಟ್ಟಡ ಕಾರ್ಮಿಕರು ಬಾಡಿಗೆಗೆ ಇದ್ದರು. ರಾತ್ರಿ ಅಡುಗೆ ನಂತರ ಗ್ಯಾಸ್ ಸ್ಟವ್ ಸ್ವಿಚ್ ಆಫ್ ಮಾಡದೆ ಬಿಟ್ಟಿದ್ದರು. ಬಾಗಿಲು, ಕಿಟಕಿಗಳನ್ನು ಮುಚ್ಚಿ ನಿದ್ದೆಗೆ ಜಾರಿದ್ದಾರೆ. ಇತ್ತ ರಾತ್ರಿಯೆಲ್ಲ ಗ್ಯಾಸ್ ಸೋರಿಕೆಯಾಗಿ ಮನೆಯೆಲ್ಲಾ ಆವರಿಸಿತ್ತು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೀಡಿ ಸೇದಲು ಕಡ್ಡಿ ಗೀರಿದ್ದಾರೆ. ಗ್ಯಾಸ್ ಸೋರಿಕೆಯಾಗಿದ್ದರಿಂದ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.
ಗಾಯಾಳುಗಳ ಕೂಗಾಟ ಕೇಳಿ ರಕ್ಷಣೆಗೆ ಧಾವಿಸಿದ ನೆರೆಹೊರೆಯವರು
ಗಾಯಾಳು ಕಾರ್ಮಿಕರು ಕತ್ತಲೆಯಲ್ಲೇ ಸಹಾಯಕ್ಕೆ ಕೂಗಿಕೊಂಡಿದ್ದಾರೆ. ಗಾಯಾಳುಗಳ ಕೂಗಾಟ ಕೇಳಿ ನೆರೆಹೊರೆಯವರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಅವಘಡದಲ್ಲಿ ಆರು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇನ್ನು ಸಿಲಿಂಡರ್ ಸ್ಫೋಟದ ತೀವ್ರತೆ ಹೇಗಿತ್ತು ಎಂದರೆ ಮನೆಯ ಸಿಮೆಂಟ್ ಶೀಟ್ಗಳು ಛಿದ್ರಗೊಂಡಿವೆ. ಸ್ಫೋಟದ ನಂತರ ಮನೆಯಲ್ಲಿದ್ದ ಬಟ್ಟೆಬರೆ ಎಲ್ಲಾ ಸುಟ್ಟು ಕರಕಲಾಗಿವೆ.








