ಶಿವಮೊಗ್ಗ: ಜಿಲ್ಲೆಯ ಆಲ್ಕೋಳ ವೃತ್ತದ ಬಳಿ ಇರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ ನಡೆಯುತ್ತಿರುವ ವಿವಿಧ ಪರೀಕ್ಷೆಗಳಲ್ಲಿ ಅಕ್ರಮಗಳು ಬೆಳಕಿಗೆ ಬಂದಿದ್ದು, ಸಾಮೂಹಿಕ ನಕಲು ಮುಂದುವರಿದಿದೆ ಎಂದು ಆರೋಪಿಸಲಾಗಿದೆ.
ಇಲ್ಲಿ ಹಣ ಕೊಟ್ಟರೆ ಸಾಕು, ಪರೀಕ್ಷೆ ಕೂಡ ತುಂಬಾ ಸಲೀಸಾಗಲಿದೆ. ಹಣ ಕೊಟ್ಟು ಪರೀಕ್ಷೆಯನ್ನು ಹೇಗೆ ಬೇಕಾದರೂ ಬರೆಯಬಹುದು, ನಿಮ್ಮನ್ನು ಕೇಳುವವರು ಯಾರೂ ಇಲ್ಲ ಎಂಬ. ಹಣ ಕೊಟ್ಟವರಿಗೆ ಪುಸ್ತಕ ಮತ್ತು ಮೊಬೈಲ್ ಇಟ್ಟುಕೊಂಡೇ ಪರೀಕ್ಷೆ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹಣ ನೀಡಿದವರಿಗೆ ಎರಡನೇ ಫ್ಲೋರ್ನಲ್ಲಿ ಪರೀಕ್ಷೆ ಬರೆಯಲು ಸಕಲ ವ್ಯವಸ್ಥೆ ಮಾಡಲಾಗುತ್ತಿದ್ದರೆ, ಹಣ ನೀಡದವರಿಗೆ ಮೊದಲ ಫ್ಲೋರ್ನಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ಅವರ ಕುಮ್ಮಕ್ಕಿನಿಂದಲೇ ಈ ಅಕ್ರಮ ನಡೆಯುತ್ತಿದೆ ಎನ್ನಲಾಗಿದ್ದು, ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಮುಕ್ತವಾಗಿ ಕಾಪಿ ಹೊಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ದೂರಲಾಗಿದೆ. ಇದರಿಂದ ಕಷ್ಟಪಟ್ಟು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ಹಣ ಪಡೆದು ಈ ರೀತಿ ಸಾಮೂಹಿಕ ನಕಲಿಗೆ ಕುಮ್ಮಕ್ಕು ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.








