ದೂರುದಾರ ಮೊಹಮ್ಮದ್ ಅಫ್ರೀದ್ ಅವರು ಜೋಕಟ್ಟೆಯ ಮೊಹಮ್ಮದ್ ಹನೀಫ್ ಗುಡ್ಡೆಮನೆ ಎಂಬವರ ಮಾಲಿಕತ್ವದ ‘ಮಹೇಂದ್ರ ಪಿಕಪ್’ ವಾಹನದಲ್ಲಿ ಚಾಲಕರಾಗಿದ್ದಾರೆ. ಅಕ್ಟೋಬರ್ 25ರಂದು ಬೆಳಗಿನ ಜಾವ 1:00 ಗಂಟೆಗೆ ಹನೀಫ್ ಅವರ ಸೂಚನೆಯಂತೆ ಕಲಂದರ್ ಶಾಫಿ ಜತೆಗೂಡಿ ಎಮ್ಮೆ ಮತ್ತು ಎತ್ತಿನ ಮಾಂಸ ತರಲು ಕೇರಳದ ಉಪ್ಪಳದ ಬಂದಿಯೋಡ್ಗೆ ತೆರಳಿದ್ದರು. ಅಲ್ಲಿ ಮೊಹಮ್ಮದ್ ಕುಂಞ ಎಂಬವರಿಂದ ಸುಮಾರು 327 ಕೆ.ಜಿ ತುಂಡರಿಸಿದ ಮಾಂಸವನ್ನು ಅಧಿಕೃತ ಬಿಲ್ ಪಡೆದು ವಾಹನದಲ್ಲಿ ತುಂಬಿಸಿಕೊಂಡು ಬೆಳಗ್ಗೆ 5:15ಕ್ಕೆ ವಾಪಸ್ ಹೊರಟಿದ್ದರು.
ಬೆಳಗ್ಗೆ 5:40ರ ಸುಮಾರಿಗೆ ತಲಪಾಡಿ ಟೋಲ್ ಗೇಟ್ ಬಳಿ ಬರುತ್ತಿದ್ದಂತೆ, ಬಿಳಿ ಬಣ್ಣದ ಸೆಲೆರಿಯೋ ಕಾರೊಂದು ಪಿಕಪ್ ವಾಹನವನ್ನು ಹಿಂಬಾಲಿಸಲು ಆರಂಭಿಸಿತು. ನೇತ್ರಾವತಿ ಸೇತುವೆ ದಾಟಿ ಇಂಡಿಯನ್ ಹಾಲ್ ಬಳಿ ಬಂದಾಗ, ರಸ್ತೆಯಲ್ಲಿ ನಿಂತಿದ್ದ ನಾಲ್ವರು ವ್ಯಕ್ತಿಗಳು ಕಬ್ಬಿಣದ ರಾಡ್ ಹಿಡಿದು, ಬ್ಯಾರಿಕೇಡ್ ಅಡ್ಡಹಾಕಿ ವಾಹನ ತಡೆಯಲು ಯತ್ನಿಸಿದರು. ಚಾಲಕ ಬ್ಯಾರಿಕೇಡ್ನಿಂದ ತಪ್ಪಿಸಿಕೊಂಡು ನಂತೂರು ಕಡೆಗೆ ವಾಹನ ಚಲಾಯಿಸಿದಾಗ, ಹಿಂದಿನಿಂದ ಕ್ರೇಟಾ ಮತ್ತು ಸೆಲೆರಿಯೋ ಕಾರುಗಳಲ್ಲಿದ್ದವರು “ಬೇವರ್ಸಿ, ನಾಯಿದ ಮಗೆ ಗಾಡಿಯನ್ನು ನಿಲ್ಲಿಸು” ಎಂದು ಅವಾಚ್ಯ ಶಬ್ದಗಳಿಂದ ಕೂಗುತ್ತಾ ಬೆನ್ನಟ್ಟಿದ್ದಾರೆ. ಕೆಪಿಟಿ ಜಂಕ್ಷನ್ ಬಳಿ ಬಂದಾಗ, ಕದ್ರಿ ಕಡೆಯಿಂದ ಬೊಂದೇಲ್ ಕಡೆಗೆ ಹೋಗುತ್ತಿದ್ದ ಬಸ್ಸೊಂದನ್ನು ಕೂಳೂರು ರಸ್ತೆಗೆ ಅಡ್ಡಹಾಕಿ ಪಿಕಪ್ ವಾಹನಕ್ಕೆ ಅಡ್ಡ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ.
ಜೀವಭಯದಿಂದ ಕಂಗಾಲಾದ ಚಾಲಕ ಅಫ್ರೀದ್, ಕೆಪಿಟಿ ಜಂಕ್ಷನ್ನಿಂದ ಕಾವೂರು ಕಡೆಗೆ ವಾಹನ ತಿರುಗಿಸಿಕೊಂಡು ಪರಾರಿಯಾಗಿದ್ದಾರೆ. ಮೆಸ್ಕಾಂ ಪವರ್ ಗ್ರಿಡ್ ಎದುರು ಪೆಟ್ರೋಲ್ ಪಂಪ್ ಬಳಿ ಕ್ರೇಟಾ ಕಾರು ಮತ್ತೆ ಪಿಕಪ್ ತಡೆಯಲು ಯತ್ನಿಸಿದರೂ, ಡಿವೈಡರ್ ಬಳಿ ರಾಂಗ್ ರೂಟ್ನಲ್ಲಿ (Wrong Side) ಕಾವೂರು ಜಂಕ್ಷನ್ಗೆ ವಾಹನ ನುಗ್ಗಿಸಿ, ಮರವೂರು ಮೂಲಕ ಜೋಕಟ್ಟೆಯ ಈದ್ಗಾ ಮಸೀದಿ ಬಳಿಯಿದ್ದ ಮಾಂಸದ ಶಾಫ್ಗೆ ಸುರಕ್ಷಿತವಾಗಿ ತಲುಪಿದ್ದಾರೆ.
ಅಂದು ಜೀವಭಯದಿಂದಾಗಿ ತಕ್ಷಣ ದೂರು ನೀಡಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿರುವ ಚಾಲಕ, ಬಿಳಿ ಬಣ್ಣದ ಸೆಲೆರಿಯೋ ಹಾಗೂ ಕ್ರೇಟಾ ಕಾರುಗಳಲ್ಲಿ ಬಂದು ಜೀವ ಬೆದರಿಕೆ ಹಾಕಿ, ಅಡ್ಡಗಟ್ಟಿದ 5 ರಿಂದ 6 ಮಂದಿ ಅಜ್ಞಾತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








