ಮಂಗಳೂರು : ರಾಷ್ಟ್ರೀಯ ಹೆದ್ದಾರಿ-66ರ ಜಪ್ಪಿನಮೊಗರು ಬಳಿ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಯುವಕನಿಗೆ ಡಿಕ್ಕಿ ಹೊಡೆದು, ನಿಲ್ಲಿಸದೇ ಪರಾರಿಯಾಗಿದ್ದ ಬಸ್ ಅನ್ನು ಮಂಗಳೂರು ಸಂಚಾರ ದಕ್ಷಿಣ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಅಪಘಾತ ಎಸಗಿ ಪರಾರಿಯಾಗಿದ್ದ ಬಸ್ ಚಾಲಕ, ಕಾಸರಗೋಡು ಮೂಲದ ಸುಧೀರ್ ಕೆ. (40) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅಕ್ಟೋಬರ್ 22, 2026ರಂದು ರಾತ್ರಿ ಸುಮಾರು 7:50 ಗಂಟೆಗೆ ಜಪ್ಪಿನಮೊಗರಿನ ಎ.ಕೆ. ಲಾಡ್ಜ್ ಎದುರು, ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-66ರ ಎಡಬದಿಯ ಕಚ್ಚಾ ರಸ್ತೆಯಲ್ಲಿ ಸುಮಾರು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಯುವಕ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಬಸ್ ಅವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪಾದಚಾರಿ ರಸ್ತೆ ಬದಿಗೆ ಎಸೆಯಲ್ಪಟ್ಟು, ತಲೆಗೆ ತೀವ್ರ ರಕ್ತಗಾಯವಾಗಿತ್ತು. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ಉಪಚರಿಸಿ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಯುವಕ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಅಪಘಾತ ನಡೆಸಿ ನಿಲ್ಲಿಸದೇ ಪರಾರಿಯಾದ ಹಿನ್ನೆಲೆಯಲ್ಲಿ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 285/2026 ರಂತೆ ಭಾರತೀಯ ನ್ಯಾಯ ಸಂಹಿತೆಯ (BNS 2023) ಕಲಂ 281, 106(1) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 134(a) ಮತ್ತು (b) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ತೀವ್ರಗೊಳಿಸಿದ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ, 42 ನೇ ರೂಟ್‌ನಲ್ಲಿ ಸಂಚರಿಸುವ ‘SRI KATEEL’ (ಶ್ರೀ ಕಟೀಲ್) ಹೆಸರಿನ ಬಸ್ ಅಪಘಾತ ಎಸಗಿರುವುದು ಸಾಬೀತಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಗಳು ಹಾಗೂ ಅಪಘಾತದ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರ ಹೇಳಿಕೆಯನ್ನು ಆಧರಿಸಿ, ಬಸ್ ಅನ್ನು ಕಾಸರಗೋಡು ನಿವಾಸಿ ಸುಂದರ ಎಂಬುವರ ಮಗ ಸುಧೀರ್ ಕೆ. (40) ಚಲಾಯಿಸುತ್ತಿದ್ದುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಚಾಲಕನ ಬಳಿ ಚಾಲ್ತಿಯಲ್ಲಿರುವ ಚಾಲನಾ ಪರವಾನಗಿ ಇರುವುದು ಕಂಡುಬಂದಿದೆ. ಮುಂದಿನ ತನಿಖೆಯಲ್ಲಿ ಬಸ್ ಚಾಲಕ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ (ಸಾಕ್ಷಿ) ಮೊಬೈಲ್ ಲೋಕೇಶನ್ ವಿವರ ಸೇರಿದಂತೆ ಎಲ್ಲಾ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಕಲೆಹಾಕಿ, ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.








