ಬೆಂಗಳೂರು: ಪೊಲೀಸರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ಗೃಹ ಕಚೇರಿಗೆ ತೆರಳಿ ಮಹಜರು ನಡೆಸಿದ್ದಾರೆ ಎಂದು ವರದಿಯಾಗಿದೆ.
ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ದೆಹಲಿಯ ರಿತೇಶ್ ಪಾಂಡೆ ಎಂಬಾತನನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಕುಮಾರಸ್ವಾಮಿ ಅವರ ಸರ್ಕಾರಿ ನಿವಾಸದಲ್ಲೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದಕ್ಕೂ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಗಳ ಬೆನ್ನಲ್ಲೇ ಸ್ಟಿಂಗ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಿದ ಆರೋಪದಲ್ಲಿ ರಿತೇಶ್ ಪಾಂಡೆ ಬಂಧನವಾಗಿತ್ತು.
ಕುಮಾರಸ್ವಾಮಿ ಅವರ ದೆಹಲಿಯ ಸರ್ಕಾರಿ ನಿವಾಸದಲ್ಲಿರುವ ಗೃಹ ಕಚೇರಿಯ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ರಿತೇಶ್ ಪಾಂಡೆ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ. ಈ ಕೆಲಸಕ್ಕಾಗಿ ಆತನಿಗೆ ತಿಂಗಳಿಗೆ ₹50 ಸಾವಿರ ವೇತನ ನಿಗದಿಯಾಗಿತ್ತು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಪ್ರಜ್ವಲ್ ಪ್ರಸಾದ್ ಎಂಬಾತ ಎರಡು ಮೊಬೈಲ್ ಫೋನ್‌ಗಳನ್ನು ಖರೀದಿಸಿ ತರುವಂತೆ ರಿತೇಶ್ ಪಾಂಡೆಗೆ ಸೂಚಿಸಿ ₹30 ಸಾವಿರ ನೀಡಿದ್ದ ಎನ್ನಲಾಗಿದೆ. ಅದರಂತೆ ಪಾಂಡೆ ದೆಹಲಿಯ ಕರೋಲ್‌ಬಾಗ್ ಪ್ರದೇಶದಿಂದ ತಲಾ ₹15 ಸಾವಿರ ಬೆಲೆಯ ಎರಡು ಹಳೆಯ ಮೊಬೈಲ್‌ಗಳನ್ನು ಖರೀದಿಸಿ ತಂದಿದ್ದ ಎಂದು ತನಿಖೆಯ ವೇಳೆ ತಿಳಿದುಬಂದಿದೆ.
ಈ ಮೊಬೈಲ್‌ಗಳನ್ನು ಬಳಸಿಕೊಂಡು ಸ್ಟಿಂಗ್ ಆಪರೇಷನ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ರಿತೇಶ್ ಪಾಂಡೆ ತನ್ನ ಫೇಸ್‌ಬುಕ್ ಖಾತೆಯಲ್ಲಿಯೂ ವಿಡಿಯೋಗಳನ್ನು ಹಂಚಿಕೊಂಡಿದ್ದ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಕುಮಾರಸ್ವಾಮಿ ಅವರ ದೆಹಲಿ ಕಚೇರಿಗೆ ಕರೆದೊಯ್ದು ಸಿಸಿಬಿ ಪೊಲೀಸರು ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಬಳಸಲಾದ ಮೊಬೈಲ್‌ಗಳು, ವಿಡಿಯೋ ಅಪ್‌ಲೋಡ್ ಪ್ರಕ್ರಿಯೆ ಮತ್ತು ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.








