ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೇರಳ ಲಾಟರಿ ಜಾಹೀರಾತನ್ನು ನಂಬಿದ ಮಂಗಳೂರಿನ ವ್ಯಕ್ತಿಯೊಬ್ಬರು ಬರೋಬ್ಬರಿ ₹7,22,804 ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಲಾಟರಿಯಲ್ಲಿ ಬಹುಮಾನ ಗೆದ್ದಿದ್ದೀರಿ ಎಂದು ನಂಬಿಸಿ, ಹಣ ಪಡೆಯಲು ತೆರಿಗೆ ಮತ್ತು ವಿವಿಧ ಶುಲ್ಕಗಳ ನೆಪದಲ್ಲಿ ಅಪರಿಚಿತರು ಈ ಮೊತ್ತವನ್ನು ವಸೂಲಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದಲ್ಲಿ ಪೌಡರ್ ಕೋಟಿಂಗ್ ಉದ್ಯಮ ನಡೆಸುತ್ತಿರುವ ವ್ಯಕ್ತಿಯೊಬ್ಬರು ಸೆಪ್ಟೆಂಬರ್ 25ರ ರಾತ್ರಿ ಫೇಸ್ಬುಕ್ ನೋಡುತ್ತಿದ್ದಾಗ ಕೇರಳ ಲಾಟರಿ ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಖರೀದಿಸಬಹುದು ಎಂಬ ವಿಡಿಯೋ ಗಮನಿಸಿದ್ದರು. ಈ ಜಾಹೀರಾತಿನಲ್ಲಿದ್ದ ಮಾಹಿತಿಯನ್ನು ನಂಬಿದ ಅವರು, ಎರಡು ದಿನಗಳ ಬಳಿಕ ಅಂದರೆ ಸೆಪ್ಟೆಂಬರ್ 27ರಂದು ಅದರಲ್ಲಿ ನೀಡಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಟಿಕೆಟ್ ಖರೀದಿಸುವ ಬಗ್ಗೆ ಮಾತನಾಡಿದ್ದರು.
ನಂತರ ಟಿಕೆಟ್ ಮೊತ್ತ ಪಾವತಿಸಲು ವಾಟ್ಸಾಪ್ನಲ್ಲಿ ಕ್ಯೂಆರ್ ಕೋಡ್ ಕಳುಹಿಸಲಾಗಿತ್ತು. ಅದರ ಮೂಲಕ ₹200 ಪಾವತಿಸಿ ಲಾಟರಿ ಟಿಕೆಟ್ ಪಡೆದಿದ್ದರು. ಆದರೆ ಅದೇ ದಿನ ಸಂಜೆ ಅವರಿಗೆ ಮತ್ತೊಂದು ಸಂದೇಶ ಬಂದಿದ್ದು, ಲಾಟರಿಯಲ್ಲಿ ₹12 ಲಕ್ಷ ಹಾಗೂ ₹5 ಲಕ್ಷ ಬಹುಮಾನ ದೊರೆತಿದೆ ಎಂದು ತಿಳಿಸಲಾಗಿತ್ತು.
ಬಹುಮಾನದ ಹಣವನ್ನು ಖಾತೆಗೆ ಜಮೆ ಮಾಡಿಸಿಕೊಳ್ಳಬೇಕಾದರೆ ತೆರಿಗೆ ಹಾಗೂ ಪ್ರಕ್ರಿಯೆ ಶುಲ್ಕ ಪಾವತಿಸುವುದು ಕಡ್ಡಾಯ ಎಂದು ಸಂದೇಶ ಕಳುಹಿಸಿದವರು ಸೂಚಿಸಿದ್ದರು. ಈ ಮಾತನ್ನು ನಂಬಿದ ವ್ಯಕ್ತಿ, ಅವರು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಕಳುಹಿಸಲು ಆರಂಭಿಸಿದ್ದರು.
ಸೆಪ್ಟೆಂಬರ್ 27ರಿಂದ ಅಕ್ಟೋಬರ್ 27ರ ನಡುವಿನ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಖಾತೆಗಳಿಂದ ಹಲವು ಬಾರಿ ಹಣ ವರ್ಗಾವಣೆ ಮಾಡಲಾಗಿತ್ತು. ಹೀಗೆ ಒಟ್ಟು ₹7,22,804 ಪಾವತಿಸಿದರೂ, ಹೇಳಿದ್ದ ಬಹುಮಾನದ ಹಣ ಮಾತ್ರ ಕೈ ಸೇರಿರಲಿಲ್ಲ.
ಇದಾದ ಬಳಿಕ ತಾನು ಪಾವತಿಸಿದ ಶುಲ್ಕದ ಮೊತ್ತವನ್ನಾದರೂ ಮರಳಿಸುವಂತೆ ವ್ಯಕ್ತಿ ಕೇಳಿಕೊಂಡಿದ್ದರು. ಆದರೆ ಹಣ ಹಿಂದಿರುಗಿಸದೆ ಸಂಪರ್ಕಕ್ಕೂ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ಅವರಿಗೆ ಅರಿವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಫೇಸ್ಬುಕ್ ಮೂಲಕ ಪರಿಚಯವಾದ ಆನ್ಲೈನ್ ಲಾಟರಿ ವ್ಯವಹಾರದ ಹೆಸರಿನಲ್ಲಿ ಅಪರಿಚಿತರು ವಂಚನೆ ನಡೆಸಿದ್ದಾರೆ ಎಂದು ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ. ವಂಚನೆಗೆ ಬಳಸಲಾದ ಮೊಬೈಲ್ ಸಂಖ್ಯೆಗಳು, ಹಣ ವರ್ಗಾವಣೆಯಾದ ಖಾತೆಗಳು ಹಾಗೂ ಆರೋಪಿಗಳ ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಳ್ಳಬೇಕಿದೆ.








