ಲಖನೌ: ಅಲಿಗಂಜ್ ಪ್ರದೇಶದ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 15 ಮಂದಿ ಮೃತಪಟ್ಟಿದ್ದಾರೆ. ಈ ಭೀಕರ ದುರಂತವು ಇದೇ ವರ್ಷದ ನವೆಂಬರ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದ ಯುವ ಜೋಡಿಯೊಂದರ ಸುಂದರ ಕನಸುಗಳನ್ನು ಸುಟ್ಟು ಭಸ್ಮ ಮಾಡಿದೆ.
ಮೃತರ ಪೈಕಿ 30 ವರ್ಷದ ಅನಾಮಿಕಾ ಸಾಮಂತ್ ಮತ್ತು 27 ವರ್ಷದ ನೀಲೇಶ್ ಕುಮಾರ್ ಇಬ್ಬರೂ ಸಹ ಸೇರಿದ್ದು, ಇವರು ವಾಣಿಜ್ಯ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಕಚೇರಿಯಲ್ಲಿ ಸಿಲುಕಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇವರಿಬ್ಬರೂ 3ಡಿ ಆರ್ಟ್ ನಿರ್ಮಾಣ ಹಾಗೂ ಗೇಮ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ‘ಹೆಡ್ ಹಾಪರ್ ಸ್ಟುಡಿಯೋಸ್’ ಸಂಸ್ಥೆಯಲ್ಲಿ ಅನಿಮೇಷನ್ ಕಲಾವಿದರಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಮೂರು ವರ್ಷಗಳ ಹಿಂದೆ ಕಚೇರಿಯಲ್ಲಿಯೇ ಅನಾಮಿಕಾ ಮತ್ತು ನೀಲೇಶ್ ಅವರ ಪರಿಚಯವಾಗಿತ್ತು. ಆರಂಭದಲ್ಲಿ ವೃತ್ತಿಪರ ಸ್ನೇಹವಾಗಿದ್ದ ಇವರ ಸಂಬಂಧ ಕ್ರಮೇಣ ಆತ್ಮೀಯತೆಯಾಗಿ ಬೆಳೆದು, ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಉಭಯ ಕುಟುಂಬಗಳ ಒಪ್ಪಿಗೆಯೊಂದಿಗೆ ಇತ್ತೀಚೆಗಷ್ಟೇ ಅವರ ನಿಶ್ಚಿತಾರ್ಥವೂ ಅತ್ಯಂತ ಸಡಗರದಿಂದ ನೆರವೇರಿತ್ತು. ಕಳೆದ ವಾರವಷ್ಟೇ ಅನಾಮಿಕಾ ಅವರ ಪೋಷಕರು ಲಖನೌಗೆ ಬಂದು ನೀಲೇಶ್ ಕುಟುಂಬದವರೊಂದಿಗೆ ವಿವಾಹದ ಎಲ್ಲಾ ಸಿದ್ಧತೆಗಳನ್ನು ಅಂತಿಮಗೊಳಿಸಿದ್ದರು. ಮುಂದಿನ ವಾರ ನೀಲೇಶ್ ಅವರ ಕುಟುಂಬಸ್ಥರು ಕೋಲ್ಕತ್ತಾಕ್ಕೆ ತೆರಳುವ ಯೋಜನೆಯನ್ನೂ ರೂಪಿಸಿದ್ದರು.
ನೀಲೇಶ್, ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ನಿವೃತ್ತ ನೌಕರ ಶತ್ರುಘ್ನ ಲಾಲ್ ಮತ್ತು ಸಂತೋಷ್ ಕುಮಾರಿ ದಂಪತಿಯ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿದ್ದರು. ಸೋಮವಾರ ಅಲಿಗಂಜ್ ಪ್ರದೇಶದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಾಗ, ಈ ದುರಂತ ತಮ್ಮ ಮನೆಯಲ್ಲೇ ದುಃಖದ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಕುಟುಂಬಸ್ಥರು ಊಹಿಸಿರಲಿಲ್ಲ. ಆದರೆ, ಸಂಜೆ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಶವಾಗಾರದಿಂದ ಬಂದ ದೂರವಾಣಿ ಕರೆ ನೀಲೇಶ್ ಸಾವಿನ ಕಹಿಸುದ್ದಿಯನ್ನು ತಲುಪಿಸಿದೆ.
ಕುಟುಂಬದವರ ಪ್ರಕಾರ, ನೀಲೇಶ್ ಅವರ ಮೃತದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಿರಲಿಲ್ಲ. ಹೀಗಾಗಿ ಅವರು ಬೆಂಕಿಯ ಜ್ವಾಲೆಯಿಂದಲ್ಲ, ಬದಲಿಗೆ ಕಚೇರಿಯ ತುಂಬಾ ಆವರಿಸಿದ್ದ ಭೀಕರ ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೊಂದೆಡೆ, ತೀವ್ರ ದುಃಖದಲ್ಲಿ ಮುಳುಗಿದ್ದ ಕೋಲ್ಕತ್ತಾ ಮೂಲದ ಅನಾಮಿಕಾ ಅವರ ಕುಟುಂಬಕ್ಕೆ ಲಖನೌಗೆ ತಕ್ಷಣವೇ ಬರಲು ಸಾಧ್ಯವಾಗದ ಕಾರಣ, ಜಿಲ್ಲಾಡಳಿತ ಮತ್ತು ಪೊಲೀಸರ ನೆರವಿನೊಂದಿಗೆ ಅವರ ಮೃತದೇಹವನ್ನು ಏರ್‌ಲಿಫ್ಟ್ ಮೂಲಕ ಕೋಲ್ಕತ್ತಾಕ್ಕೆ ಕಳುಹಿಸಿಕೊಡಲಾಗಿದೆ. ತಂದೆ ವಿಶ್ವನಾಥ ಸಾಮಂತಾ ಮತ್ತು ತಾಯಿ ಸುಲೇಖಾ ಸಾಮಂತ್ ಅವರ ಹಿರಿಯ ಪುತ್ರಿಯಾಗಿದ್ದ ಅನಾಮಿಕಾ ಸಾವು ಎರಡೂ ಕುಟುಂಬಗಳನ್ನು ಅನಾಥವಾಗಿಸಿದೆ.








