ಮಂಗಳೂರು: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ, ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಇನ್ಫೋಸಿಸ್ ಉದ್ಯೋಗಿಯೊಬ್ಬರು ಮೃತಪಟ್ಟಿದ್ದು, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಾಟೆಕಲ್ ಜಂಕ್ಷನ್ ಸಮೀಪ ಶನಿವಾರ ಸಂಜೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ಕುವೆಂಪುನಗರ ನಿವಾಸಿ, ಇನ್ಫೋಸಿಸ್ ಉದ್ಯೋಗಿಯಾಗಿದ್ದ ಪ್ರಜ್ವಲ್ ಅರ್ನಾಲ್ಡ್ (31) ಎಂದು ಗುರುತಿಸಲಾಗಿದೆ. ಪ್ರಜ್ವಲ್ ಅವರು ತಮ್ಮ ಸಹೋದ್ಯೋಗಿ ಅಕ್ಷತಾ ಅವರೊಂದಿಗೆ ಸ್ಕೂಟರ್‌ನಲ್ಲಿ ಕಂಬಳದ ಪದವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ಕೊಣಾಜೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಕಾಲೇಜು ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಚರಂಡಿಗೆ ಉರುಳಿದ್ದು, ಸ್ಕೂಟರ್ ಬಸ್ಸಿನ ಅಡಿಯಲ್ಲಿ ಸಿಲುಕಿಕೊಂಡಿದೆ.
ಅಪಘಾತದ ತೀವ್ರತೆಯಿಂದ ಪ್ರಜ್ವಲ್ ಹಾಗೂ ಅಕ್ಷತಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಕ್ರೇನ್ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಿ ಸ್ಕೂಟರ್‌ನಡಿ ಸಿಲುಕಿದ್ದ ಇಬ್ಬರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪ್ರಜ್ವಲ್ ಅವರು ಮೃತಪಟ್ಟಿದ್ದಾರೆ. ಅಕ್ಷತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿಕೊಂಡಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ಬಳಿಕ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು.
ಮಾಹಿತಿ ಪಡೆದ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬರಬೇಕಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








