ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಚಾರಿ ಸಂಚಾರವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ ಸುಮಾರು 1,500 ಕಿಲೋಮೀಟರ್ ಉದ್ದದ ಪ್ರಮುಖ, ಉಪ-ಪ್ರಮುಖ ಹಾಗೂ ಮುಖ್ಯ ರಸ್ತೆಗಳನ್ನು ‘ನಾನ್-ವೆಂಡಿಂಗ್ ಝೋನ್’ (Non-Vending Zone) ಎಂದು ಘೋಷಿಸಲು ಯೋಜನೆ ರೂಪಿಸಲಾಗಿದೆ. ಉಳಿದ ರಸ್ತೆಗಳಲ್ಲಿ ಪಾದಚಾರಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಬೀದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗುತ್ತದೆ.
ಈ ಕುರಿತು ಸೋಮವಾರ ನಡೆದ ವರ್ಚುವಲ್ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು. ಬುಧವಾರದಿಂದ ನಗರದ ಐದು ನಗರ ನಿಗಮಗಳ ವ್ಯಾಪ್ತಿಯಲ್ಲಿ ಆರಂಭವಾಗಲಿರುವ ‘ಸೇಫ್ ಫುಟ್‌ಪಾತ್ ಕ್ಯಾಂಪೇನ್’ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ) ಕಾಯ್ದೆ-2014 ಅನ್ವಯ ಪಾದಚಾರಿ ಮಾರ್ಗಗಳ ಮೇಲಿನ ಅತಿಕ್ರಮಣ ತೆರವು ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಬೆಂಗಳೂರು ನಗರದಲ್ಲಿ ಸುಮಾರು 15 ಸಾವಿರ ಕಿಲೋಮೀಟರ್ ರಸ್ತೆ ಜಾಲವಿದ್ದು, ಅದರಲ್ಲಿ ಸುಮಾರು 1,500 ಕಿಲೋಮೀಟರ್ ರಸ್ತೆಗಳನ್ನು ನಾನ್-ವೆಂಡಿಂಗ್ ವಲಯಗಳಾಗಿ ಗುರುತಿಸಬೇಕು ಎಂದು ಸಚಿವರು ತಿಳಿಸಿದರು. ಉಳಿದ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಅವಕಾಶ ನೀಡಬಹುದಾದರೂ, ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅತಿಕ್ರಮಣ ತೆರವು ಕಾರ್ಯ ಆರಂಭಿಸುವ ಮುನ್ನ ಯಾವ ರಸ್ತೆಗಳಲ್ಲಿ ಅಭಿಯಾನ ನಡೆಯಲಿದೆ ಎಂಬುದನ್ನು ಗುರುತಿಸಿ, ಸ್ಥಳೀಯ ನಿವಾಸಿಗಳು ಹಾಗೂ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಮುಂಚಿತವಾಗಿ ನೋಟಿಸ್ ನೀಡಿ ಬಳಿಕವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಅದೇ ವೇಳೆ, ಆಯ್ದ ರಸ್ತೆಗಳಲ್ಲಿನ ಹಾಳಾಗಿರುವ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಒಡೆದಿರುವ ಸ್ಲ್ಯಾಬ್‌ಗಳ ಬದಲಾವಣೆ, ಕರ್ಬ್‌ಗಳ ದುರಸ್ತಿ ಸೇರಿದಂತೆ ಅಗತ್ಯ ನಾಗರಿಕ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪಾದಚಾರಿಗಳಿಗೆ ಸುರಕ್ಷಿತ ಮತ್ತು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್, ಐದು ನಗರ ನಿಗಮಗಳ ಆಯುಕ್ತರು, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಬೀದಿ ವ್ಯಾಪಾರಿಗಳ ಸಂಘದ ವಿರೋಧ
ಇದೇ ವೇಳೆ, ಬೀದಿ ವ್ಯಾಪಾರಿಗಳ ವಿರುದ್ಧ ತೆರವು ಕಾರ್ಯಾಚರಣೆ ನಡೆಸಬಾರದು ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಸರ್ಕಾರವನ್ನು ಒತ್ತಾಯಿಸಿದೆ. ಬೀದಿ ವ್ಯಾಪಾರಿಗಳ ಕಾಯ್ದೆ-2014 ಅನ್ನು ಸಂಪೂರ್ಣವಾಗಿ ಜಾರಿಗೊಳಿಸದೆ ವ್ಯಾಪಾರಿಗಳನ್ನು ಅತಿಕ್ರಮಣಕಾರರು ಎಂದು ಪರಿಗಣಿಸುವುದು ಕಾನೂನುಬಾಹಿರ ಎಂದು ಸಂಘ ಅಭಿಪ್ರಾಯಪಟ್ಟಿದೆ.
ಕಡ್ಡಾಯ ಸಮೀಕ್ಷೆ ಪೂರ್ಣಗೊಳಿಸಿ, ವ್ಯಾಪಾರ ಪ್ರಮಾಣಪತ್ರ (Vending Certificate) ವಿತರಿಸುವ ಮುನ್ನವೇ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಯುತ್ತಿದೆ ಎಂದು ಸಂಘ ಆರೋಪಿಸಿದೆ. ಪಾದಚಾರಿ ಮಾರ್ಗಗಳಿಗೆ ತೊಂದರೆ ಉಂಟಾಗಲು ಕೇವಲ ಬೀದಿ ವ್ಯಾಪಾರಿಗಳೇ ಕಾರಣರಲ್ಲ; ಅಕ್ರಮ ವಾಹನ ನಿಲುಗಡೆ, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಯುಟಿಲಿಟಿ ಬಾಕ್ಸ್‌ಗಳು, ಕಟ್ಟಡ ನಿರ್ಮಾಣದ ಅವಶೇಷಗಳು ಹಾಗೂ ಪಾದಚಾರಿ ಮಾರ್ಗ ಅತಿಕ್ರಮಿಸಿರುವ ವಾಣಿಜ್ಯ ಕಟ್ಟಡಗಳೂ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ ಎಲ್ಲ ರೀತಿಯ ಅತಿಕ್ರಮಣಗಳ ವಿರುದ್ಧ ಸಮಾನವಾಗಿ ಕ್ರಮ ಕೈಗೊಳ್ಳಬೇಕು, ಬೀದಿ ವ್ಯಾಪಾರಿಗಳನ್ನು ಮಾತ್ರ ಗುರಿಯಾಗಿಸಬಾರದು ಎಂದು ಸಂಘ ಆಗ್ರಹಿಸಿದೆ.








