ವಯನಾಡು: ಮಲಪ್ಪುರಂ ಮತ್ತು ವಯನಾಡು ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ಯೋಜನೆ ನಡೆಯುತ್ತಿದ್ದ ಕಲ್ಲಡಿ ಪ್ರದೇಶದ ಮೀನಾಕ್ಷಿ ಸೇತುವೆ ಸಮೀಪ ಭೂಕುಸಿತ ಸಂಭವಿಸಿದ್ದು, ಕನಿಷ್ಠ ಐದು ಮಂದಿ ಗಾಯಗೊಂಡಿದ್ದಾರೆ. ಸದ್ಯ ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿರುವ ಪ್ರಕಾರ, ಸುರಂಗ ಯೋಜನೆಗೆ ಸಂಬಂಧಿಸಿದ ಕಾರ್ಮಿಕರು ತಂಗಿದ್ದ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಘಟನೆಯ ಬಳಿಕ ಸ್ಥಳೀಯ ನಿವಾಸಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಕನಿಷ್ಠ ಮೂವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಮಾಹಿತಿ ಪ್ರಕಾರ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆ ಮುಂದುವರಿದಿದೆ. ಭೂಕುಸಿತದಿಂದ ಸುರಂಗ ಯೋಜನೆಯ ಸಿಬ್ಬಂದಿಯನ್ನು ಸಾಗಿಸಲು ಬಳಸುತ್ತಿದ್ದ ಕೆಲವು ವಾಹನಗಳಿಗೂ ಹಾನಿಯಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿವೆ. ಭೂಕುಸಿತದಲ್ಲಿ ಇನ್ನೂ ಯಾರಾದರೂ ಸಿಲುಕಿರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ಮುಂದುವರಿದಿದೆ.
ಭೂಕುಸಿತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ ನಡೆಸಿ, ವಯನಾಡಿನ ಸಚಿವ ಟಿ. ಸಿದ್ದೀಕ್ ಅವರಿಗೆ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಅವರಿಗೂ ತಕ್ಷಣ ವಯನಾಡಿಗೆ ತೆರಳಿ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಟಿ. ಸಿದ್ದೀಕ್, ಸುರಂಗ ಯೋಜನೆಗೆ ಸಂಬಂಧಿಸಿದಂತೆ ಮಣ್ಣು ಮತ್ತು ಮಣ್ಣುಗಡ್ಡೆಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಿರುವುದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಆರೋಪಿಸಿದರು. ಈ ಕುರಿತು ಹಿಂದೆಲೇ ಎಚ್ಚರಿಕೆ ನೀಡಲಾಗಿದ್ದರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು.
ಈವರೆಗೆ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋഴിക്കോട് ಹಾಗೂ ವಯನಾಡಿನಿಂದ ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಆಗಮಿಸುತ್ತಿವೆ. ಭೂಕುಸಿತದಲ್ಲಿ ಸಿಲುಕಿರುವವರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.








