ಅನಂತಪುರ: ಯಾವುದೇ ಸಾಕ್ಷ್ಯಗಳಿಲ್ಲದೆ ಸಂಪೂರ್ಣ ನಿಗೂಢವಾಗಿದ್ದ ವ್ಯಕ್ತಿಯೊಬ್ಬನ ಭೀಕರ ಕೊಲೆ ಪ್ರಕರಣವನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗಂ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಒಂದು ಸಣ್ಣ ಹಪ್ಪಳದ ಪ್ಯಾಕೆಟ್ ಸಹಾಯದಿಂದ ಬಳ್ಳಾರಿ ಮೂಲದ ಇಬ್ಬರು ಮೂಗ ಮತ್ತು ಕಿವುಡ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬಳ್ಳಾರಿ ಜಿಲ್ಲೆಯ ಬಸವರಾಜು (31) ಮತ್ತು ಕೊಟ್ರೇಶ್ (36) ಎಂದು ಗುರುತಿಸಲಾಗಿದೆ. ಹಪ್ಪಳ ವ್ಯಾಪಾರಿಯೊಬ್ಬನ ಬಳಿ ಭಾರಿ ಹಣಯಿದೆ ಎಂದು ನಂಬಿ, ಆತನನ್ನು ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ್ದಾರೆ. ಕಳೆದ ಜೂನ್ 23 ರಂದು ಅನಂತಪುರ ಜಿಲ್ಲೆಯ ಡಿ. ಹಿರೇಹಾಳ್ ಮಂಡಲದ ಪುಲಾಕುರ್ತಿ ಗ್ರಾಮದ ಸಮೀಪವಿರುವ ಕೃಷಿ ಜಮೀನಿನಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಈ ಕೊಲೆಯ ಬಗ್ಗೆ ಯಾವುದೇ ಗುರುತುಗಳು ಇಲ್ಲದ ಕಾರಣ ಪೊಲೀಸರಿಗೆ ಇದು ದೊಡ್ಡ ಸವಾಲಾಗಿತ್ತು.
ಆದರೆ, ಘಟನಾ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವಿಧಿವಿಜ್ಞಾನ ತಂಡಕ್ಕೆ ಭಾಗಶಃ ಸುಟ್ಟುಹೋಗಿದ್ದ ಕನ್ನಡ ದಿನಪತ್ರಿಕೆ, ಸುಟ್ಟ ಬಟ್ಟೆಗಳು, ಒಂದು ಜನಿವಾರ ಮತ್ತು ಮುಖ್ಯವಾಗಿ ಒಂದು ಹಪ್ಪಳದ ಪ್ಯಾಕೆಟ್ ಪತ್ತೆಯಾಗಿತ್ತು. ಈ ಹಪ್ಪಳದ ಪ್ಯಾಕೆಟ್ ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿತು. ಪೊಲೀಸರು ತಕ್ಷಣವೇ ಆ ಹಪ್ಪಳದ ಪ್ಯಾಕೆಟ್ ಮೇಲಿದ್ದ ತಯಾರಕರ ವಿಳಾಸವನ್ನು ಪತ್ತೆ ಹಚ್ಚಿ ಚೆನ್ನೈಗೆ ತೆರಳಿದರು. ಅಲ್ಲಿಂದ ಆ ಹಪ್ಪಳದ ಸರಬರಾಜು ಜಾಲವನ್ನು ಬೆನ್ನಟ್ಟಿದಾಗ ಈ ಪ್ರಕರಣಕ್ಕೆ ಬಳ್ಳಾರಿಯ ಲಿಂಕ್ ಇದೆ ಎಂಬುದು ಗೊತ್ತಾಗಿದೆ. ಬಳ್ಳಾರಿಯಲ್ಲಿ ತನಿಖೆ ನಡೆಸಿದಾಗ, ಕಳೆದ ಕೆಲವು ದಿನಗಳಿಂದ ಗುರುರಾಜು ರಾವ್ ಎಂಬ ಮೂಗ ಮತ್ತು ಕಿವುಡ ಹಪ್ಪಳ ವ್ಯಾಪಾರಿ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಸ್ಥಳದಲ್ಲಿ ಸಿಕ್ಕ ಕನ್ನಡ ಪತ್ರಿಕೆ ಹಾಗೂ ಜನಿವಾರದ ಆಧಾರದ ಮೇಲೆ ಸುಟ್ಟುಹೋದ ಶವ ಗುರುರಾಜು ರಾವ್ ಅವರದ್ದೇ ಎಂದು ಪೊಲೀಸರು ಖಚಿತಪಡಿಸಿಕೊಂಡರು.
ಗುರುರಾಜು ರಾವ್ ಕೊಲೆಯಾದ ಬಳಿಕವೂ ಆತನ ಎಟಿಎಂ (ATM) ಕಾರ್ಡ್ ಬಳಸಿ ಹಣ ಡ್ರಾ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಯಿತು. ಎಟಿಎಂ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಹಣ ಡ್ರಾ ಮಾಡುವಾಗ ಪರಸ್ಪರ ಸೈನ್ ಲಾಂಗ್ವೇಜ್ (ಸಂಕೇತ ಭಾಷೆ) ಮೂಲಕ ಮಾತನಾಡಿಕೊಳ್ಳುತ್ತಿರುವುದು ಕಂಡುಬಂದಿತು. ಈ ಸುಳಿವಿನ ಬೆನ್ನತ್ತಿದ ಪೊಲೀಸರು ಸಾಕ್ಷ್ಯ ಹಾಗೂ ಕಾಲ್ ರೆಕಾರ್ಡ್ಸ್ ಆಧಾರದ ಮೇಲೆ ಜುಲೈ 8 ರಂದು ಓಬುಳಾಪುರಂ ಕ್ರಾಸ್ ಬಳಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಅನಂತಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಜಗದೀಶ್ ಅವರು ಹೇಳಿರುವಂತೆ, ಕೊಲೆಯಾದ ಗುರುರಾಜು ರಾವ್ ಹಪ್ಪಳದ ಬಿಸಿನೆಸ್ ಹಾಗೂ ದೇವಸ್ಥಾನದ ಕೆಲಸಗಳಿಂದ ಭಾರಿ ಹಣ ಉಳಿತಾಯ ಮಾಡಿದ್ದಾರೆ ಎಂದು ಆರೋಪಿಗಳು ನಂಬಿದ್ದರು. ಹಣದ ಆಸೆಗೆ ಬಿದ್ದ ಇಬ್ಬರು ಆರೋಪಿಗಳು, ಗುರುರಾಜು ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಿದ್ದಾರೆ. ಗುರುತು ಸಿಗಬಾರದೆಂಬ ಕಾರಣಕ್ಕೆ ಶವಕ್ಕೆ ಬೆಂಕಿ ಹಚ್ಚಿ, ಆತನ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಹಾಗೂ ಟಿವಿಎಸ್ ಎಕ್ಸ್‌ಎಲ್ ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಬಂಧಿತ ಆರೋಪಿಗಳೂ ಸಹ ಮೂಗ ಮತ್ತು ಕಿವುಡರಾಗಿದ್ದರಿಂದ, ಪೊಲೀಸರು ಸೈನ್ ಲಾಂಗ್ವೇಜ್ ಎಕ್ಸ್‌ಪರ್ಟ್ಸ್ ನೆರವು ಪಡೆದು ವಿಚಾರಣೆ ನಡೆಸಿ ಸತ್ಯ ಒಪ್ಪಿಸಿದ್ದಾರೆ. ಆರೋಪಿಗಳಿಂದ ಮೃತರ ವಾಹನ, ಮೊಬೈಲ್ ಹಾಗೂ ಹಪ್ಪಳದ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.








