ಬೆಂಗಳೂರು: ರಾಜಧಾನಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ಭೀಕರ ಕೌಟುಂಬಿಕ ರಕ್ತಪಾತ ನಡೆದಿದೆ. ಯುವಕನೊಬ್ಬ ತನ್ನ ಹೆತ್ತ ತಾಯಿ, ವೃದ್ಧ ಅಜ್ಜಿ ಹಾಗೂ ಜೊತೆಯಲ್ಲೇ ಇದ್ದ ಬಾವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೂವರನ್ನು ಕೊಲೆ ಮಾಡಿದ ಬಳಿಕ ಆರೋಪಿಯು ತಾನೂ ಸಹ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕೊಟ್ಟಿಗೆಪಾಳ್ಯ ನಿವಾಸಿ ಪ್ರಶಾಂತ್ (34) ಹತ್ಯೆ ನಡೆಸಿ ತಾನೂ ಸಾವಿಗೆ ಶರಣಾದ ನರಹಂತಕ. ಈತನ ರಕ್ತಪಿಪಾಸುತನಕ್ಕೆ ತಾಯಿ ಮಂಗಳಮ್ಮ (55), ಅಜ್ಜಿ ನಂಜಮ್ಮ ಹಾಗೂ ಬಾವ ಸತೀಶ್ (50) ಬಲಿಯಾದ ದುರ್ದೈವಿಗಳಾಗಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಅವರು ಒದಗಿಸಿದ ಮಾಹಿತಿ ಪ್ರಕಾರ, ಅವಿವಾಹಿತನಾಗಿದ್ದ ಪ್ರಶಾಂತ್ ತನ್ನ ಪೋಷಕರು, ಅಜ್ಜಿ ಹಾಗೂ ಬಾವನೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದನು. ತಾಯಿ ಮಂಗಳಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಅಜ್ಜಿ ನಂಜಮ್ಮ ಪೌರಕಾರ್ಮಿಕರಾಗಿದ್ದರು. ಇವರೊಂದಿಗೆ ವಾಸವಿದ್ದ ಅವಿವಾಹಿತ ಬಾವ ಸತೀಶ್ ಪ್ಲಂಬರ್ ಕೆಲಸ ಮಾಡಿಕೊಂಡಿದ್ದರು. ಶನಿವಾರ ಮುಂಜಾನೆ ಪ್ರಶಾಂತ್‌ನ ತಂದೆ ಚಿಕ್ಕಣ್ಣ ಅವರು ಇಸ್ತ್ರಿ ಅಂಗಡಿ ತೆರೆಯಲು ಮನೆಯಿಂದ ಹೊರಗೆ ಹೋದ ತಕ್ಷಣವೇ ಈ ಭೀಕರ ಹತ್ಯಾಕಾಂಡ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಬಳಸಿಕೊಂಡ ಪ್ರಶಾಂತ್, ಮಾರಕಾಸ್ತ್ರದಿಂದ ತಾಯಿ, ಅಜ್ಜಿ ಹಾಗೂ ಬಾವನ ಮೇಲೆ ಜವರಾಯನಂತೆ ಎರಗಿ ಇಬೀ ಭೀಕರವಾಗಿ ಕೊಚ್ಚಿ ಕೊಂದಿದ್ದಾನೆ.
ಮನೆಯೊಳಗಿನಿಂದ ಕೇಳಿಬಂದ ತೀವ್ರ ಕಿರುಚಾಟ ಹಾಗೂ ಆರ್ತನಾದವನ್ನು ಆಲಿಸಿದ ಅಕ್ಕಪಕ್ಕದ ನಿವಾಸಿಗಳು ತಕ್ಷಣವೇ ಮನೆಗೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರ ಹೆಣಗಳನ್ನು ಕಂಡು ದಿಗಿಲುಗೊಂಡ ಸಾರ್ವಜನಿಕರು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ಪ್ರಶಾಂತ್‌ನನ್ನು ಅತ್ಯಂತ ಸಾಹಸದಿಂದ ಹಿಡಿದು ಮನೆಯ ಒಂದು ಕೋಣೆಯೊಳಗೆ ತಳ್ಳಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕೋಣೆಯ ಒಳಗಡೆಯೇ ಪ್ರಶಾಂತ್ ನೇಣಿಗೆ ಶರಣಾಗಿದ್ದಾನೆ. ಆರೋಪಿ ಪ್ರಶಾಂತ್ ತೀವ್ರ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಡಿಸಿಪಿ ತಿಳಿಸಿದ್ದಾರೆ.








