ಬಂಟ್ವಾಳ : ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಕಕ್ಯಪದವು ನಿವಾಸಿ ಲಾವಣ್ಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಚೇತನ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆದರೆ, ಕೃತ್ಯ ಎಸಗಿದ ಬಳಿಕ ತಾನೂ ಇಲಿಪಾಷಾಣ (ವಿಷ) ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದು, ಸದ್ಯ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಎಸ್ಪಿ ಅರುಣ್ ಕುಮಾರ್ ಅವರು ಮಾಧ್ಯಮಗಳಿಗೆ ಪ್ರಕರಣದ ಭೀಕರತೆಯನ್ನು ವಿವರಿಸುತ್ತಾ, “ಆರೋಪಿ ಚೇತನ್ ಮೃತ ಲಾವಣ್ಯಳಿಗೆ ದೂರದ ಸಂಬಂಧಿಯಾಗಿದ್ದು, ಆಕೆಯನ್ನು ಏಕಪಕ್ಷೀಯವಾಗಿ (One-sided) ಪ್ರೀತಿಸುತ್ತಿದ್ದ. ಆದರೆ ಲಾವಣ್ಯ ಈತನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಆಕ್ರೋಶಗೊಂಡು, ಬ್ಯಾಗ್‌ನಲ್ಲಿ ತಂದಿದ್ದ ತಲ್ವಾರ್‌ನಿಂದ (ಲಾಂಗ್) ಬಸ್ ನಿಲ್ದಾಣದಲ್ಲೇ ಸಾರ್ವಜನಿಕರ ಸಮ್ಮುಖದಲ್ಲಿ ತೀವ್ರವಾಗಿ ಕಡಿದು ಹತ್ಯೆ ಮಾಡಿದ್ದಾನೆ,” ಎಂದು ತಿಳಿಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿದ್ದ ಚೇತನ್ ಪತ್ತೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಶುಕ್ರವಾರ ಮುಂಜಾನೆ ಮಂಗಳೂರಿನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿಸಿ ವಿಚಾರಣೆ ನಡೆಸುತ್ತಿದ್ದಾಗ, ತಾನು ಕೃತ್ಯ ಎಸಗಿದ ಬಳಿಕ ಇಲಿಪಾಷಾಣ ಸೇವಿಸಿರುವುದಾಗಿ ಚೇತನ್ ಬಾಯಿಬಿಟ್ಟಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣದ ತನಿಖೆ ಮುಂದುವರಿದಿದೆ.








