ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ವಲಯದ ಗಡಿಯಲ್ಲಿ (ಎಲ್‌ಒಸಿ) ಶುಕ್ರವಾರ ರಾತ್ರಿ ಸುಮಾರು ಎರಡು ಗಂಟೆಗಳ ಕಾಲ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಭಯೋತ್ಪಾದಕರು ಒಳನುಸುಳಸಲು ಪ್ರಯತ್ನಿಸಿದ್ದು, ಸೇನಾ ಪಡೆಗಳು ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆ 9:50ರ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭವಾಯಿತು. ಈ ವೇಳೆ ಗಡಿಯನ್ನು ಕಾಯುತ್ತಿದ್ದ ಭಾರತೀಯ ಸೇನಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ದಾಳಿಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ಉಗ್ರರ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ದೇಶದ ಪ್ರಕ್ಷುಬ್ಧತೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನ ಎಲ್‌ಒಸಿ ಉದ್ದಕ್ಕೂ ಗುಂಡಿನ ದಾಳಿ ನಡೆಸಿದೆ ಎಂದು ಭದ್ರತಾ ವಿಶ್ಲೇಷಕರು ತಿಳಿಸಿದ್ದಾರೆ.








