ನವದೆಹಲಿ : ಉಜಿರೆಯ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಕೋರಿ ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ಸುಪ್ರೀಂ ಕೋರ್ಟ್ ವಿಚಾರಣೆ ಪೂರ್ಣಗೊಂಡಿದ್ದು, ಮರು ತನಿಖೆಯ ಸ್ವರೂಪದ ಕುರಿತಾದ ಆದೇಶವನ್ನು ಮಾನ್ಯ ನ್ಯಾಯಾಲಯ ಕಾಯ್ದಿರಿಸಿದೆ. ವಿಚಾರಣೆ ವೇಳೆ ತನಿಖಾ ಸಂಸ್ಥೆಯಾದ ಸಿಬಿಐ ಅನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಸಿಬಿಐ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, “ಘಟನೆ ನಡೆದು 14 ವರ್ಷಗಳೇ ಕಳೆದಿವೆ. ಆದರೂ ಸರಿಯಾದ ತನಿಖೆ ನಡೆದಿಲ್ಲ. ಸಿಬಿಐ ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಏಕೆ ಹೋಗಿಲ್ಲ?” ಎಂದು ಖಾರವಾಗಿ ಪ್ರಶ್ನಿಸಿತು. ಅಲ್ಲದೆ “ಕೆಳ ಹಂತದ ನ್ಯಾಯಾಲಯದಲ್ಲಿ ಇನ್ನು ಕೆಲವು ಆರೋಪಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಕೊರತೆ ಹಾಗೂ ಹಣಕಾಸಿನ ಕೊರತೆಯ ನೆಪ ಹೇಳುತ್ತಿರುವುದು ತೀರಾ ಅಸಮಂಜಸ” ಎಂದು ಕಿಡಿಕಾರಿತು.








