ನವದೆಹಲಿ: ನ್ಯಾಯಾಲಯಗಳ ಕಲಾಪದ ವೀಡಿಯೋಗಳನ್ನು ರೆಕಾರ್ಡ್ ಮಾಡುವುದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಕೋರ್ಟ್ ಕಲಾಪಗಳ ವೀಡಿಯೋಗಳನ್ನು ಅನಿಯಂತ್ರಿತವಾಗಿ ಪ್ರಸಾರ ಮಾಡುವುದನ್ನು ‘ಚೀಲದಿಂದ ಹೊರಬಂದ ರಾಕ್ಷಸ’ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನುಮತಿಯಿಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಲಯದ ಕಲಾಪಗಳ ಆಡಿಯೊ-ವಿಡಿಯೋ ರೆಕಾರ್ಡಿಂಗ್‌ಗಳನ್ನು ಹಂಚಿಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ.
ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮತ್ತು ವೀಡಿಯೋ ಪ್ರಸಾರವನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ ಮೋಹನ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.
ಸಂಬಂಧಿತ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಅವರ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಮಾಧ್ಯಮ ಅಥವಾ ಇತರ ಡಿಜಿಟಲ್ ವೇದಿಕೆಗಳಲ್ಲಿ ನ್ಯಾಯಾಂಗ ಪ್ರಕ್ರಿಯೆಗಳ ಆಡಿಯೋ/ವಿಡಿಯೋ ರೆಕಾರ್ಡಿಂಗ್‌ಗಳನ್ನು ಮಾರ್ಪಡಿಸುವುದು, ಪ್ರಸಾರ ಮಾಡುವುದು, ಪೋಸ್ಟ್ ಮಾಡುವುದು, ಮರು-ಪೋಸ್ಟ್ ಮಾಡುವುದು, ಅಪ್‌ಲೋಡ್ ಮಾಡುವುದಕ್ಕೆ ನಿಷೇಧ ವಿಧಿಸಲಾಗಿದೆ. ಈ ಆದೇಶವು ನ್ಯಾಯಾಲಯದ ಕಲಾಪಗಳ ಸುದ್ದಿ ವರದಿ ಮಾಡುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದನ್ನು ತಮಾಷೆ ಆದೇಶವೆಂದು ಪರಿಗಣಿಸಬಾರದು ಎಂದು ಪೀಠ ತಿಳಿಸಿದೆ.








