ಉಡುಪಿ: ನಗರದ ಹೊರವಲಯದ ಕೊಡಂಕೂರು ಪುತ್ತೂರು ಗ್ರಾಮದಲ್ಲಿ ಶಿಕ್ಷಕಿಯೊಬ್ಬರ ಮನೆಯ ಟೆರೇಸ್ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಂಕೂರಿನ ಲಲಿತ ನಿವಾಸದ ಶಶಿರೇಖಾ ಬಿ (38) ಎಂಬುವರು ಮೈಸೂರು ಜಿಲ್ಲೆಯ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದಾರೆ. ಬೇಸಿಗೆ ರಜೆಗೆ ಊರಿಗೆ ಬಂದಿದ್ದ ಇವರು ಮೇ 25 ರಂದು ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಮೈಸೂರಿಗೆ ತೆರಳಿದ್ದರು. ಭಾನುವಾರ (ಆಗಸ್ಟ್ 9) ರಾತ್ರಿ 10:30ರ ಸುಮಾರಿಗೆ ಪತಿ ಶರತ್ ಕುಮಾರ್ ಎಂ.ಬಿ ಹಾಗೂ ಕುಟುಂಬದವರೊಂದಿಗೆ ವಾಪಸ್ ಮನೆಗೆ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಳ್ಳರು ಮೊದಲು ಮನೆಯ ಪ್ರಮುಖ ಪ್ರವೇಶದ್ವಾರವನ್ನು ಆಯುಧದಿಂದ ಮೀಟಿ ತೆರೆಯಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಮನೆಯ ದಕ್ಷಿಣ ಬದಿಯ ಗೋಡೆ ಹತ್ತಿ ಟೆರೇಸ್ ಮೇಲಿನ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಮನೆಯಲ್ಲಿದ್ದ ಕೀಗಳನ್ನು ಬಳಸಿ ಎರಡು ಬೆಡ್‌ರೂಂಗಳ ಕಬೋರ್ಡ್ ಹಾಗೂ ಬೀರುಗಳನ್ನು ತೆಗೆದು ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ.
ಬೆಡ್‌ರೂಂ ಕಬೋರ್ಡ್‌ನಲ್ಲಿದ್ದ 100 ಗ್ರಾಂ ತೂಕದ ಚಿನ್ನದ ಸರ, ತಲಾ 1 ಗ್ರಾಂ ಮತ್ತು ಅರ್ಧ ಗ್ರಾಂ ತೂಕದ ಚಿನ್ನದ ನಾಣ್ಯಗಳು (ಮೌಲ್ಯ ₹10 ಲಕ್ಷ) ಹಾಗೂ 1 ಕೆಜಿ 650 ಗ್ರಾಂ ತೂಕದ ಬೆಳ್ಳಿಯ ಚೆಂಬು, ಹರಿವಾಣ, ಪಂಚಪಾತ್ರೆ, ತಟ್ಟೆ, ದೇವರ ಕೋಣೆಯಲ್ಲಿದ್ದ ಅರಿಶಿನ-ಕುಂಕುಮ ಬಟ್ಟಲು, ದೀಪಗಳು ಮತ್ತು ಕಾಲುಚೈನ್ ಸೇರಿದಂತೆ ಬೆಳ್ಳಿ ಆಭರಣಗಳು ಹಾಗೂ ₹40,000 ನಗದು ಸೇರಿ ಒಟ್ಟು ₹12,00,000/- ಮೌಲ್ಯದ ಸೊತ್ತುಗಳನ್ನು ಕಳ್ಳರು ದೋಚಿದ್ದಾರೆ.
ಈ ಕುರಿತು ಶಶಿರೇಖಾ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 107/2026, ಕಲಂ: 331(3), 331(4), 305 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.








