ವಾಷಿಂಗ್ಟನ್: ಇರಾನ್ ವಿರುದ್ಧ ಮತ್ತಷ್ಟು ಆಕ್ರಮಣಕಾರಿ ಹೆಜ್ಜೆ ಇಡಲು ಅಮೆರಿಕ ಸಜ್ಜಾಗಿದ್ದು, ಆ ದೇಶದ ಆರ್ಥಿಕತೆಯನ್ನು ಜಾಗತಿಕ ಮಟ್ಟದಲ್ಲಿ ಸಂಪೂರ್ಣವಾಗಿ ಪ್ರತ್ಯೇಕಿಸಲು ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಕಠಿಣ ಆರ್ಥಿಕ ಒತ್ತಡ ಹೇರಲಾಗುವುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಖಾಸಗಿ ದೂರದರ್ಶನ ಜಾಲ ‘ನ್ಯೂಸ್ಮ್ಯಾಕ್ಸ್’ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಮಾತನಾಡಿ, “ಬರುವ ವಾರ ಇರಾನ್ ವಿರುದ್ಧ ಜಗತ್ತು ಇದುವರೆಗೆ ಕಂಡಿರದ ಕಠಿಣ ನಿರ್ಬಂಧಗಳನ್ನು ಘೋಷಿಸಲಾಗುವುದು” ಎಂದು ಸುಳಿವು ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಈ ಎಚ್ಚರಿಕೆ ಹೊರಬಿದ್ದಿದೆ. ಅಮೆರಿಕದ ಮುಂದಿನ ಕಾರ್ಯತಂತ್ರವು ಕೇವಲ ಆರ್ಥಿಕ ಒತ್ತಡಕ್ಕೆ ಸೀಮಿತವಾಗಿರದೆ, ಇರಾನ್ನ ಪ್ರಮುಖ ಬಂದರುಗಳಿಗೆ ಯಾವುದೇ ವಸ್ತುಗಳು ಒಳಗೆ ಹೋಗದಂತೆ ಹಾಗೂ ಹೊರಬರದಂತೆ ಭೌತಿಕ ನಿರ್ಬಂಧ ಹೇರುವುದನ್ನು ಒಳಗೊಂಡಿರುತ್ತದೆ ಎಂದು ಬೆಸೆಂಟ್ ವಿವರಿಸಿದ್ದಾರೆ.
ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಅಡೆತಡೆ ಉಂಟಾದರೆ ಜಾಗತಿಕ ತೈಲ ಪೂರೈಕೆ ಹಾಗೂ ಇಂಧನ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇರಾನ್ ವಿರುದ್ಧದ ಈ ಯುದ್ಧೋಪಾದಿ ತಂತ್ರದಲ್ಲಿ ತಮ್ಮ ದೇಶದ ಜನರಿಗೆ ತೈಲ ಮತ್ತು ಪೆಟ್ರೋಲ್ ಬೆಲೆಗಳನ್ನು ಕಡಿಮೆ ಮಾಡುವುದು ಮೊದಲ ಆದ್ಯತೆಯಾಗಿದೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರ ಪಡೆಯದಂತೆ ತಡೆಯುವುದು ಎರಡನೇ ಆದ್ಯತೆಯಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.








