ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದಾಗ ಗಾಯಾಳುಗಳಿಗೆ ತುರ್ತು ವೈದ್ಯಕೀಯ ನೆರವು ತ್ವರಿತವಾಗಿ ದೊರೆಯುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ್ಯಂಬುಲೆನ್ಸ್ ಸೇವೆಗಳಿಗೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಸೇವೆಯಲ್ಲಿ ವಿಳಂಬ ಅಥವಾ ನಿರ್ಲಕ್ಷ್ಯ ಕಂಡುಬಂದರೆ ಆ್ಯಂಬುಲೆನ್ಸ್ ನಿರ್ವಾಹಕರಿಗೆ ಭಾರೀ ದಂಡ ವಿಧಿಸಲಾಗುತ್ತದೆ.
ಟೋಲ್ ಪ್ಲಾಜಾದಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದರೆ, ಮಾಹಿತಿ ದೊರೆತ 10 ನಿಮಿಷದೊಳಗೆ ಆ್ಯಂಬುಲೆನ್ಸ್ ಸ್ಥಳಕ್ಕೆ ತಲುಪಬೇಕು. ವಿಳಂಬವಾದರೆ ಪ್ರತಿ ಪ್ರಕರಣಕ್ಕೆ ರೂ. 10,000 ದಂಡ ವಿಧಿಸಲಾಗುತ್ತದೆ.
ಅಪಘಾತ ಸ್ಥಳಕ್ಕೆ ತಲುಪಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ, ಒಂದು ಗಂಟೆಯೊಳಗೆ ಸಮೀಪದ ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯ. ಈ ಗಡುವು ಮೀರಿದರೂ ರೂ. 10,000 ದಂಡ ವಿಧಿಸಲಾಗುತ್ತದೆ. 10 ಕಿ.ಮೀ.ಗಿಂತ ಹೆಚ್ಚಿನ ದೂರದ ಪ್ರದೇಶಗಳಿಗೆ ದೂರಕ್ಕೆ ಅನುಗುಣವಾಗಿ ಹೆಚ್ಚುವರಿ ಸಮಯ ನೀಡಲಾಗುತ್ತದೆ. ತುರ್ತು ಕರೆ ಬಂದ ಕೂಡಲೇ ಸಿಬ್ಬಂದಿ ಕಾರ್ಯಪ್ರವೃತ್ತರಾಗಬೇಕು. ಕರೆ ಸ್ವೀಕರಿಸಿದ ಎರಡು ನಿಮಿಷದೊಳಗೆ ಆ್ಯಂಬುಲೆನ್ಸ್ ಸ್ಥಳದತ್ತ ಹೊರಡಬೇಕು. ಇದರಲ್ಲಿ ವಿಳಂಬವಾದರೆ ಪ್ರತಿ ಹೆಚ್ಚುವರಿ ನಿಮಿಷಕ್ಕೆ ರೂ. 5,000 ದಂಡ ವಿಧಿಸಲಾಗುತ್ತದೆ.
ಆ್ಯಂಬುಲೆನ್ಸ್‌ಗಳ ಚಲನವಲನವನ್ನು GPS ಹಾಗೂ IMS Care ಡ್ಯಾಶ್‌ಬೋರ್ಡ್ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ವಾಹನಗಳಲ್ಲಿ AIS-140 ಮಾನದಂಡದ GPS ಕಡ್ಡಾಯವಾಗಿದ್ದು, GPS ಇಲ್ಲದಿದ್ದರೆ ದಿನಕ್ಕೆ ರೂ. 2,500 ಹಾಗೂ ಡ್ಯಾಶ್‌ಬೋರ್ಡ್‌ನಲ್ಲಿ ವಾಹನ ಟ್ರ್ಯಾಕ್ ಆಗದಿದ್ದರೆ ದಿನಕ್ಕೆ ರೂ. 2,500 ದಂಡ ವಿಧಿಸಲಾಗುತ್ತದೆ. ತುರ್ತು ಕರೆ ಅಥವಾ ಟಿಕೆಟ್‌ಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸುವಂತಿಲ್ಲ. ಕರೆ ನಿರ್ಲಕ್ಷಿಸಿದರೆ ರೂ. 10,000 ದಂಡ ವಿಧಿಸಲಾಗುತ್ತದೆ. ಅದೇ ರೀತಿ, ಆ್ಯಂಬುಲೆನ್ಸ್‌ನಲ್ಲಿ ಕಡ್ಡಾಯವಾಗಿ ಇರಬೇಕಾದ ಜೀವ ರಕ್ಷಕ ಉಪಕರಣಗಳು, ತುರ್ತು ಔಷಧಿಗಳು ಹಾಗೂ ಅಗತ್ಯ ವೈದ್ಯಕೀಯ ಸಿಬ್ಬಂದಿ ಇಲ್ಲದಿರುವುದು ಕಂಡುಬಂದರೂ ಪ್ರತಿ ಪ್ರಕರಣಕ್ಕೆ ರೂ. 10,000 ದಂಡ ವಿಧಿಸಲಾಗುತ್ತದೆ.
ಆ್ಯಂಬುಲೆನ್ಸ್‌ಗಳು ಸದಾ ಕಾರ್ಯನಿರ್ವಹಣೆಗೆ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿದಿನ ಕನಿಷ್ಠ 5 ಕಿ.ಮೀ. ಡ್ರೈ ರನ್ ಅಥವಾ ಮಾಕ್ ಡ್ರಿಲ್ ನಡೆಸಬೇಕು. ಆದರೆ, ಅಂದು ತುರ್ತು ಸೇವೆಯಲ್ಲಿ 5 ಕಿ.ಮೀ. ಸಂಚರಿಸಿದ್ದರೆ ಡ್ರೈ ರನ್‌ನಿಂದ ವಿನಾಯಿತಿ ನೀಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತದ ಬಳಿಕ ಆ್ಯಂಬುಲೆನ್ಸ್‌ಗಳು ತಲುಪಲು ಆಗುತ್ತಿರುವ ವಿಳಂಬದ ಬಗ್ಗೆ ರಸ್ತೆ ಸುರಕ್ಷತೆ ಕುರಿತ ಸುಪ್ರೀಂಕೋರ್ಟ್ ಸಮಿತಿ ಹಾಗೂ CAG ಕಾರ್ಯಕ್ಷಮತಾ ಪರಿಶೋಧನೆಯಲ್ಲಿ ಗಮನ ಸೆಳೆಯಲಾಗಿತ್ತು. ತುರ್ತು ವೈದ್ಯಕೀಯ ನೆರವು ವಿಳಂಬವಾಗಿ ಅಮೂಲ್ಯ ಜೀವಗಳು ಕಳೆದುಹೋಗುವುದನ್ನು ತಡೆಯುವ ಉದ್ದೇಶದಿಂದ ಈ ಹೊಸ ಸೇವಾ ಮಾನದಂಡಗಳನ್ನು ಜಾರಿಗೆ ತರಲಾಗಿದೆ.








