ಹೈದರಾಬಾದ್: ಮದುವೆಯಾಗುವಂತೆ ಒತ್ತಾಯಿಸಿದ್ದಕ್ಕೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ 21 ವರ್ಷದ ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹೈದರಾಬಾದ್‌ನ ಬಾಲಾಪುರದಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮೃತ ಯುವತಿಯನ್ನು ಬಿಹಾರ ಮೂಲದ 21 ವರ್ಷದ ರೆಹಾನಾ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಹ್ಮದ್ ಸಲಾಂ ಕೂಡ 21 ವರ್ಷದವನಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಮದುವೆ ವಿಚಾರವಾಗಿ ಇಬ್ಬರ ನಡುವೆ ಇತ್ತೀಚೆಗೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಪೊಲೀಸರ ಪ್ರಕಾರ, ಘಟನೆ ಬೆಳಗಿನ ಜಾವ ಬೆಳಕಿಗೆ ಬಂದಿದೆ. ಬಾಲಾಪುರ ಪ್ರದೇಶದ ಮನೆಯೊಂದರ ಬೆಡ್‌ರೂಮ್‌ನಲ್ಲಿ ಗೋಣಿ ಚೀಲದಲ್ಲಿ ಮೃತದೇಹವೊಂದು ಇರುವ ಬಗ್ಗೆ ‘ಡಯಲ್ 100’ ಮೂಲಕ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದಾಗ ರೆಹಾನಾ ಮೃತಪಟ್ಟಿರುವುದು ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ರೆಹಾನಾ ತನ್ನನ್ನು ಮದುವೆಯಾಗುವಂತೆ ಅಹ್ಮದ್ ಸಲಾಂ ಮೇಲೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ಆರೋಪಿ ಚಾಕುವಿನಿಂದ ಆಕೆಯ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಬಳಿಕ ಮೃತದೇಹವನ್ನು ಗೋಣಿ ಚೀಲದಲ್ಲಿ ಇರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡಗಳ ಮೂಲಕ ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.








