ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿವಿಲ್ ಎಂಜಿನಿಯರ್‌ವೊಬ್ಬರು ಪತ್ನಿಯನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಹೆಗ್ಗನಹಳ್ಳಿಯ ರಾಜೇಶ್ವರಿ ನಗರದಲ್ಲಿ ನಡೆದಿದೆ. ಮೃತರನ್ನು 32 ವರ್ಷದ ಸುಮಂತ್ ಹಾಗೂ ಹುಬ್ಬಳ್ಳಿ ಮೂಲದ 29 ವರ್ಷದ ಪದ್ಮಾವತಿ ಎಂದು ಗುರುತಿಸಲಾಗಿದೆ.
ಸುಮಂತ್ ಹಾಗೂ ಪದ್ಮಾವತಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇತ್ತೀಚೆಗೆ ಹೆಗ್ಗನಹಳ್ಳಿಯ ರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಾನುವಾರ ದಂಪತಿ ನಡುವೆ ಯಾವುದೋ ವಿಚಾರಕ್ಕೆ ತೀವ್ರ ವಾಗ್ವಾದ ನಡೆದಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ಜಗಳದ ವೇಳೆ ಸುಮಂತ್ ಪತ್ನಿ ಪದ್ಮಾವತಿಯನ್ನು ದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಪತ್ನಿ ಮೃತಪಟ್ಟಿರುವುದು ಗೊತ್ತಾದ ಬಳಿಕ ಸುಮಂತ್ ತನ್ನ ತಾಯಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ. ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ದಂಪತಿ ನಡುವೆ ನಡೆದಿದ್ದ ಕಲಹಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.








