ವಿಜಯಪುರ: ನಿವೃತ್ತ ಶಿಕ್ಷಕನೊಬ್ಬರ ಮೃತದೇಹ ರಸ್ತೆ ಬದಿಯಲ್ಲಿ ಪತ್ತೆಯಾದ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ. ವಿಜಯಪುರದ ಇಂಡಿ ತಾಲೂಕಿನ ಚೌಡಿಹಾಳ್ ರಸ್ತೆಯ ಪೂಜಾರಿ ವಸ್ತಿ ತೋಟದ ಬಳಿ ಮೃತಪಟ್ಟಿದ್ದ ಸಿದ್ದಪ್ಪ ಅಂಜುಟಗಿ ಅವರ ಹತ್ಯೆಯ ಹಿಂದೆ ಪುತ್ರಿಯೇ ಇದ್ದಾಳೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಆಸ್ತಿ ವಿಚಾರದ ಜಗಳದ ಜತೆಗೆ ಆಕೆಯ ಪ್ರೇಮ ಸಂಬಂಧಕ್ಕೆ ತಂದೆ ವಿರೋಧಿಸಿದ್ದರಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣದಲ್ಲಿ ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಸಂತೋಷ್ ಸಿಂಧೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ್‌ನ ಸ್ನೇಹಿತ ಗುರುರಾಜ ಬಿರಾದಾರ್ ಕೂಡ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಆತ ತಲೆಮರೆಸಿಕೊಂಡಿರುವುದರಿಂದ ಆತನಿಗಾಗಿ ಶೋಧ ನಡೆಸಲಾಗುತ್ತಿದೆ.
ಎರಡು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದ ಸಿದ್ದಪ್ಪ ಅವರಿಗೆ ನಿವೃತ್ತಿ ಹಣ ದೊರೆತಿತ್ತು. ಇದರ ಜತೆಗೆ ಸ್ವಗ್ರಾಮದಲ್ಲಿ ಆಸ್ತಿಯೂ ಇತ್ತು. ಇದೇ ಆಸ್ತಿ ವಿಚಾರದಲ್ಲಿ ತಂದೆ ಮತ್ತು ಪುತ್ರಿಯ ನಡುವೆ ಪದೇಪದೆ ಮನಸ್ತಾಪ ಉಂಟಾಗುತ್ತಿತ್ತು ಎನ್ನಲಾಗಿದೆ. ಪ್ರಿಯಾಂಕಾ ಆಸ್ತಿಯಲ್ಲಿ ಪಾಲು ಕೇಳಿದ್ದರೂ ಸಿದ್ದಪ್ಪ ಅದಕ್ಕೆ ಒಪ್ಪಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ನಡುವೆ ವಿಜಯಪುರದಲ್ಲಿ ವಾಸಿಸುತ್ತಿದ್ದ ಪ್ರಿಯಾಂಕಾ ಆಟೋ ಚಾಲಕ ಸಂತೋಷ್ ಸಿಂಧೆ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ಸಂಬಂಧವನ್ನು ಸಿದ್ದಪ್ಪ ವಿರೋಧಿಸಿದ್ದರು. ತಂದೆಯ ವಿರೋಧ ಮತ್ತು ಆಸ್ತಿಯಲ್ಲಿ ಪಾಲು ಸಿಗದಿರುವ ವಿಚಾರ ಎರಡೂ ಸೇರಿ ಪ್ರಿಯಾಂಕಾಳಲ್ಲಿ ಅಸಮಾಧಾನ ಹೆಚ್ಚಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 15ರಂದು ಇದೇ ವಿಚಾರವಾಗಿ ತಂದೆ-ಮಗಳ ನಡುವೆ ಮತ್ತೊಮ್ಮೆ ಜಗಳ ನಡೆದಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪ್ರಿಯಾಂಕಾ ತನ್ನ ಪ್ರಿಯಕರ ಸಂತೋಷ್‌ಗೆ ಕರೆ ಮಾಡಿದ್ದಾಳೆ ಎನ್ನಲಾಗಿದೆ. ಬಳಿಕ ಸಂತೋಷ್ ಹಾಗೂ ಆತನ ಸ್ನೇಹಿತ ಗುರುರಾಜನೊಂದಿಗೆ ಸೇರಿಕೊಂಡು ಸಿದ್ದಪ್ಪ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಗಳ ಹೇಳಿಕೆಯ ಪ್ರಕಾರ, ಸಿದ್ದಪ್ಪ ಅವರನ್ನು ಮೊದಲು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ನಂತರ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆಯನ್ನು ಖಚಿತಪಡಿಸಿಕೊಂಡು, ಮೃತದೇಹವನ್ನು ರಸ್ತೆ ಬದಿಗೆ ಸಾಗಿಸಿ ಎಸೆಯಲಾಗಿದೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ರಸ್ತೆ ಬದಿಯಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಆರಂಭದಲ್ಲಿ ಅಪರಿಚಿತರು ಹತ್ಯೆ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸಿದ್ದರು. ಆದರೆ ತನಿಖೆ ಮುಂದುವರಿದಂತೆ ಕುಟುಂಬದ ಆಸ್ತಿ ಕಲಹ ಮತ್ತು ಸಿದ್ದಪ್ಪ ಅವರ ಪುತ್ರಿಯ ವೈಯಕ್ತಿಕ ಸಂಬಂಧದ ವಿಚಾರಗಳು ಪೊಲೀಸರ ಗಮನಕ್ಕೆ ಬಂದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದಾಗ ಪ್ರಕರಣದ ಹಿಂದೆ ಪುತ್ರಿಯ ಕೈವಾಡವಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಪ್ರಿಯಾಂಕಾ ಮತ್ತು ಸಂತೋಷ್ ಬಂಧನದಲ್ಲಿದ್ದು, ಅವರ ವಿಚಾರಣೆ ಮುಂದುವರಿದಿದೆ. ಮೂರನೇ ಆರೋಪಿ ಗುರುರಾಜ ಬಿರಾದಾರ್ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹತ್ಯೆಗೆ ಬಳಸಿದ ವಸ್ತುಗಳು, ಮೃತದೇಹವನ್ನು ಸಾಗಿಸಿದ ರೀತಿ ಹಾಗೂ ಕೃತ್ಯದಲ್ಲಿ ಆರೋಪಿಗಳ ಪಾತ್ರದ ಕುರಿತು ಪೊಲೀಸರು ಹೆಚ್ಚಿನ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.
ರಸ್ತೆ ಬದಿಯಲ್ಲಿ ಪತ್ತೆಯಾದ ನಿವೃತ್ತ ಶಿಕ್ಷಕನ ಸಾವನ್ನು ಆರಂಭದಲ್ಲಿ ಸಾಮಾನ್ಯ ಕೊಲೆ ಪ್ರಕರಣವೆಂದು ತನಿಖೆ ಆರಂಭಿಸಿದ್ದ ಪೊಲೀಸರಿಗೆ, ವಿಚಾರಣೆ ಮುಂದುವರಿದಂತೆ ಕುಟುಂಬದ ಆಸ್ತಿ ವಿವಾದವೇ ಪ್ರಕರಣದ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದು ಬೆಳಕಿಗೆ ಬಂದಿದೆ.








