ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನ್ಯಾಯಾಲಯವೊಂದು ಪತ್ನಿ ಹಾಗೂ ಮಗನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸುವುದರ ಜೊತೆಗೆ ₹1.5 ಲಕ್ಷ ದಂಡ ವಿಧಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಸರ್ಕಾರಿ ಅಭಿಯೋಜಕ ಕೆ.ಕೆ. ಪಾಂಡೆ ಅವರ ಪ್ರಕಾರ, 2022ರ ಜೂನ್ 23ರ ರಾತ್ರಿ ಕಪ್ತಾನ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಫರದ್ ಮುಂಡೇರಾ ಗ್ರಾಮದಲ್ಲಿ ಈ ಘಟನೆ ನಡೆದಿತ್ತು.
ರಾಮ್ ಸಮುಜ್ ಸಾಹಾನಿ ಎಂಬಾತ ತನ್ನ ಪತ್ನಿ ಶುಭಾವತಿ (30) ಮಲಗಿದ್ದ ವೇಳೆ ಆಕೆಯ ಮೇಲೆ ಪೆಟ್ರೋಲ್ ಸುರಿದಿದ್ದ. ಅಲ್ಲದೆ, ಪುತ್ರಿ ಮುಸ್ಕಾನ್ (10), ಮಕ್ಕಳಾದ ಅರುಣ್ (ಎರಡೂವರೆ ವರ್ಷ) ಮತ್ತು ಅಂಕಿತ್ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ ಎಂದು ಪಾಂಡೆ ತಿಳಿಸಿದ್ದಾರೆ.
ಘಟನೆಯಲ್ಲಿ ನಾಲ್ವರೂ ಗಂಭೀರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಬಳಿಕ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶುಭಾವತಿ ಹಾಗೂ ಅರುಣ್ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆಯ ಬಳಿಕ ಆರೋಪಪಟ್ಟಿ ಸಲ್ಲಿಸಿದ್ದರು.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಫಾಸ್ಟ್ ಟ್ರ್ಯಾಕ್ ಕೋರ್ಟ್) ಸತ್ಯಪಾಲ್ ಸಿಂಗ್ ಅವರು ಮಂಗಳವಾರ ರಾಮ್ ಸಮುಜ್ ಸಾಹಾನಿಯನ್ನು ಪತ್ನಿ ಹಾಗೂ ಮಗನ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ಹಾಗೂ ₹1.5 ಲಕ್ಷ ದಂಡ ವಿಧಿಸಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.








