ನೆಡುಮಂಗಡ್ (ಕೇರಳ) : ಕೇರಳದ ನೆಡುಮಂಗಡ್‌ನಲ್ಲಿ ಒಂದೂವರೆ ವರ್ಷದ ಕಂದಮ್ಮ ಅರ್ಷಿತ್ ಮೇಲೆ ನಡೆದ ಭೀಕರ ಹಲ್ಲೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಬೃಹತ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಮಗುವಿನ ಹೆತ್ತ ತಾಯಿ ಅಖಿಲಾ ಚಂದ್ರನ್ ಹಾಗೂ ಆಕೆಯ ಲಿವ್-ಇನ್ ಪಾರ್ಟ್‌ಫರ್ ಎ. ಅಶ್ಕರ್ ಈ ಭೀಕರ ಕೃತ್ಯದ ಪ್ರಮುಖ ಆರೋಪಿಗಳಾಗಿದ್ದಾರೆ.
ಆರೋಪಿಗಳನ್ನು ಬಂಧಿಸಿದ 83 ನೇ ದಿನದಂದು ನೆಡುಮಂಗಾಡ್ ಉಪ ಪೊಲೀಸ್ ವರಿಷ್ಠಾಧಿಕಾರಿ (DySP) ಟಿ. ಬಿನುಕುಮಾರ್ ಅವರು ನೆಡುಮಂಗಾಡ್ ಎಸ್‌ಸಿ/ಎಸ್‌ಟಿ ವಿಶೇಷ ನ್ಯಾಯಾಲಯಕ್ಕೆ 210 ಪುಟಗಳ ಸುದೀರ್ಘ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾದ ವಿವರಗಳು ಕರುಳು ಹಿಂಡುವಂತಿವೆ. ಒಂದೂವರೆ ವರ್ಷದ ಮಗುವಿನ ದೇಹದ ಮೇಲೆ ಬರೋಬ್ಬರಿ 96 ಗಾಯ ಗುರುತುಗಳು ಪತ್ತೆಯಾಗಿದ್ದು, ಇವು ಬೇರೆ ಬೇರೆ ಸಮಯದಲ್ಲಿ ಉಂಟಾದ ಗಾಯಗಳಾಗಿವೆ. ಮಗುವನ್ನು ಗೋಡೆಗೆ ಅಪ್ಪಳಿಸುವುದು, ಸಿಗರೇಟ್ ಲೈಟರ್‌ನಿಂದ ಮಗುವಿನ ಕಾಲುಗಳನ್ನು ಸುಡುವುದು ಸೇರಿದಂತೆ ಅತ್ಯಂತ ಅಮಾನವೀಯ ರೀತಿಯಲ್ಲಿ ಕಿರುಕುಳ ನೀಡಲಾಗಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ಆಂತರಿಕ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಮಗು ಕೊನೆಯುಸಿರೆಳೆದಿದೆ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ, ದೈಹಿಕ ಹಲ್ಲೆ ಹಾಗೂ ಬಾಲ ನ್ಯಾಯ (Juvenile Justice) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಗುವಿನ ತಂದೆ ಎಸ್. ಅಖಿಲ್ ಹಾಗೂ ತಾಯಿ ಅಖಿಲಾ ಚಂದ್ರನ್ ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದವರಾಗಿದ್ದರಿಂದ, ಮೊದಲ ಆರೋಪಿ ಅಶ್ಕರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನೂ ಸೇರಿಸಲಾಗಿದ್ದು, ಡಿವೈಎಸ್ಪಿ ನೇತೃತ್ವದಲ್ಲೇ ತನಿಖೆ ಪೂರ್ಣಗೊಳಿಸಲಾಗಿದೆ.








