ಬೆಂಗಳೂರು: ಸರಗಳ್ಳತನ ಮಾಡುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದು, ಹಿಗ್ಗಾಮುಗ್ಗಾ ಗೂಸ ತಿಂದಿದ್ದ ರೌಡಿಶೀಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ತಾಲೂಕಿನ ದೊಡ್ಡೇರಿ ಗ್ರಾಮದ ಕೆರೆಯಲ್ಲಿ ಆತನ ಶವ ಪತ್ತೆಯಾಗಿದೆ.
ಬ್ಯಾಟರಿ ಜಯಂತ್ ಸಾವನ್ನಪ್ಪಿದ ರೌಡಿಶೀಟರ್. ನೆಲಮಂಗಲದ ಕುಲುವನಹಳ್ಳಿ ಗೇಟ್ ಬಳಿ ಬ್ಯಾಟರಿ ಜಯಂತ್ ಹಾಗೂ ಯತೀಶ್ ಸೇರಿ ವೃದ್ಧೆಯೊಬ್ಬಳ ಮಾಂಗಲ್ಯ ಸರ ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ಸಿಕ್ಕಿಬಿದ್ದು, ಸಾರ್ವಜನಿಕರ ಬಳಿ ಪೆಟ್ಟು ತಿಂದು ಪ್ರಜ್ಞೆ ತಪ್ಪಿದ್ದರು. ಇಬ್ಬರನ್ನೂ 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಆಂಬುಲೆನ್ಸ್‌ನಿಂದ ಇಬ್ಬರೂ ಪರಾರಿಯಾಗಿದ್ದರು.
ಈಗ ಜಯಂತ್ ಶವ ದೊಡ್ಡೇರಿ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮತ್ತೋರ್ವ ಆರೋಪಿ ಯತೀಶ್‌ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಇನ್ನೂ ಜಯಂತ್ ವಿರುದ್ಧ 22 ಪ್ರಕರಣಗಳಿದ್ದವು ಎಂದು ತಿಳಿದುಬಂದಿದೆ.








