2006ರಲ್ಲಿ ಕೊಲ್ಲೂರಿನಲ್ಲಿ ನಡೆದ ಶಾಂತಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಕುಖ್ಯಾತ ಸರಣಿ ಹಂತಕ ಸೈನೈಡ್ ಮೋಹನ್ ಅಲಿಯಾಸ್ ಮೋಹನ್ ಕುಮಾರ್‌ನನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ.
ಖುಲಾಸೆ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ಬಿ. ಪ್ರಮೋದ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಆರೋಪಿಯ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಕೊಂಡಿಯನ್ನು ಸಮರ್ಪಕವಾಗಿ ಜೋಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ನಿಂತಿರುವ ಪ್ರಕರಣದಲ್ಲಿ ಆರೋಪಿಯ ವಿರುದ್ಧದ ಎಲ್ಲ ಕೊಂಡಿಗಳೂ ಸ್ಪಷ್ಟವಾಗಿ ಸಾಬೀತಾಗಬೇಕು. ಯಾವುದೇ ಅನುಮಾನ ಉಳಿದಿದ್ದರೆ ಅದರ ಲಾಭವನ್ನು ಆರೋಪಿಗೆ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಪ್ರಾಸಿಕ್ಯೂಷನ್ ಆರೋಪದ ಪ್ರಕಾರ, ಮೋಹನ್ ಶಾಂತಾಳಿಗೆ ‘ರಾಜೇಶ್’ ಎಂಬ ನಕಲಿ ಹೆಸರಿನಲ್ಲಿ ಪರಿಚಯಿಸಿಕೊಂಡು, ಮದುವೆಯಾಗುವುದಾಗಿ ನಂಬಿಸಿ 2006ರ ನವೆಂಬರ್ 9ರಂದು ಆಕೆಯನ್ನು ಕೊಲ್ಲೂರಿಗೆ ಕರೆದೊಯ್ದಿದ್ದ. ಬಳಿಕ ಆಕೆಗೆ ಸೈನೈಡ್ ನೀಡಿದ್ದರಿಂದ ಶಾಂತಾ ಮೃತಪಟ್ಟರು ಎಂಬ ಆರೋಪ ಕೇಳಿಬಂದಿತ್ತು.
ನಂತರ ಮತ್ತೊಂದು ಪ್ರಕರಣದಲ್ಲಿ ಮೋಹನ್ ಬಂಧನಕ್ಕೊಳಗಾದ ಬಳಿಕ ಶಾಂತಾ ಕೊಲೆ ಪ್ರಕರಣದಲ್ಲೂ ಆತನ ಪಾತ್ರ ಬೆಳಕಿಗೆ ಬಂದಿತ್ತು ಎಂದು ಪ್ರಾಸಿಕ್ಯೂಷನ್ ತಿಳಿಸಿತ್ತು. ಆದರೆ ಮರುತನಿಖೆ ವೇಳೆ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯಿಂದ ಸೈನೈಡ್ ಸೇವನೆಯಿಂದಲೇ ಸಾವು ಸಂಭವಿಸಿದೆ ಎಂಬುದನ್ನು ಖಚಿತವಾಗಿ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.
ಹೀಗಾಗಿ ಆರೋಪಿಯ ವಿರುದ್ಧದ ಸಾಂದರ್ಭಿಕ ಸಾಕ್ಷ್ಯಗಳ ಸರಪಳಿ ಸಂಪೂರ್ಣವಾಗಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಖುಲಾಸೆ ತೀರ್ಪನ್ನು ಎತ್ತಿಹಿಡಿದು ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ.








