50 ವರ್ಷದ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 30 ವರ್ಷದ ತನ್ನ ಸ್ವಂತ ಮಗನನ್ನೇ ಕೊಂದು, ಮನೆಯೊಳಗೆ ಹೂತು ಹಾಕಿದ್ದಾಳೆ. ಮೂರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆ ಪೊಲೀಸರ ಮುಂದೆ ಶರಣಾಗಿದ್ದಾಳೆ.
ವಾರಿಚಿಯೂರಿನ ಜಿ ರಾಜಾ ಅಲಿಯಾಸ್ ಮೆಟ್ಟುಪಟ್ಟಿ ರಾಜ(30) ಕೊಲೆಯಾದವನು. ಅಯ್ಯಮ್ಮಾಳ್ ಕೊಲೆ ಮಾಡಿದ ತಾಯಿ. ಅಯ್ಯಮ್ಮಾಳ್ ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ಮಗ ವಿವಾಹಿತನಾಗಿದ್ದರೂ, ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಎನ್ನಲಾಗಿದೆ.
ಚೆನ್ನೈ ತಮಿಳುನಾಡಿನ ವಾರಿಚಿಯೂರಿನಲ್ಲಿ ಇತ್ತೀಚೆಗೆ ಮಗ ರಾಜ ನಾಪತ್ತೆಯಾಗಿದ್ದನು ಮತ್ತು ನೆರೆಹೊರೆಯವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಅಯ್ಯಮ್ಮಾಳ್ ಅವರನ್ನು ಮಗನ ಬಗ್ಗೆ ವಿಚಾರಣೆ ನಡೆಸಿದಾಗ, ಅವನು ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿಸಿದ್ದಾಳೆ.
ಆದಾಗ್ಯೂ, ಆಕೆಯ ಹೇಳಿಕೆಗಳು ಬದಲಾಗುತ್ತಲೇ ಇದ್ದವು. ರಾಜ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿರಲಿಲ್ಲ ಮತ್ತು ಆಗಾಗ್ಗೆ ಆ ಪ್ರದೇಶದಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ಬಗ್ಗೆ ನೆರೆಹೊರೆಯವರು ಹೇಳಿದ್ದಾರೆ. ಮತ್ತು ಅವನು ಮಾದಕ ವ್ಯಸನಿಯಾಗಿದ್ದ, ತಾಯಿ ಅಯ್ಯಮ್ಮಾಳ್ ಮನೆಯಲ್ಲಿ ಮಲಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಬುಧವಾರ, ಅಯ್ಯಮ್ಮಾಳ್ ಗ್ರಾಮ ಆಡಳಿತ ಅಧಿಕಾರಿಬಳಿ ಹೋಗಿ ತನ್ನ ಮಗನನ್ನು ಕೊಂದು ಮನೆಯೊಳಗೆ ಶೌಚಾಲಯ ನಿರ್ಮಾಣವಾಗುತ್ತಿದ್ದ ಸ್ಥಳದಲ್ಲಿ ಹೂತುಹಾಕಿದ್ದಾಗಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ. ತನ್ನ ಮಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಮತ್ತು ಅವನಿಂದ ತಪ್ಪಿಸಿಕೊಳ್ಳಲು ತಾನು ಅವನನ್ನು ಕೊಂದಿದ್ದೇನೆ ಎಂದು ತಿಳಿಸಿದ್ದಾಳೆ.
ವಿಎಒ ನೀಡಿದ ದೂರಿನ ಆಧಾರದ ಮೇಲೆ, ಕರುಪ್ಪಾಯುರಾಣಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತು ಗುರುವಾರ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.








