ಬೆಂಗಳೂರಿನ ಆನೇಕಲ್ ತಾಲೂಕಿನ ತಟ್ಟನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ನಲ್ಲಿರುವ ಅಮೆಜಾನ್ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಎರಡು ಕೇಂದ್ರಗಳಿಂದ ಒಟ್ಟು ₹4.02 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ. ಆನೇಕಲ್ ಕೇಂದ್ರದಿಂದ ₹2.45 ಲಕ್ಷ ಹಾಗೂ ದೇವನಹಳ್ಳಿ ಕೇಂದ್ರದಿಂದ ₹1.57 ಲಕ್ಷ ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಯಮಗಳ ಪ್ರಕಾರ ಫಾರ್ಮಾಸ್ಯುಟಿಕಲ್ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ವಿತರಿಸಲು ಅಗತ್ಯವಿರುವ ಅಧಿಕೃತ ಪರವಾನಗಿ ಈ ಎರಡೂ ಕೇಂದ್ರಗಳಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತದಳಕ್ಕೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ.
ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ಹಾಗೂ ಔಷಧ ಪರಿವೀಕ್ಷಕರ ತಂಡ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ₹2,45,352 ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕಿ ವಿಭಾ ಹಾಗೂ ಅವರ ತಂಡ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ನಲ್ಲಿರುವ ಅಮೆಜಾನ್ ಸಂಸ್ಥೆಯ ಪರವಾನಗಿ ರಹಿತ ಆವರಣದ ಮೇಲೆ ದಾಳಿ ನಡೆಸಿದೆ. ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ₹1,57,000 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.








