ಮಂಗಳೂರು ನಗರದ ಕೊಡಿಯಾಲ್ ಬೈಲಿನ ಉಪ ಕಾರಾಗೃಹಕ್ಕೆ ತಡರಾತ್ರಿ ಪೊಲೀಸರು ದಿಢೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಜೈಲಿನ ಎ ಮತ್ತು ಬಿ ಬ್ಯಾರಕ್ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು, ಅಡಗಿಸಿಟ್ಟಿದ್ದ ಎಂಟಕ್ಕೂ ಹೆಚ್ಚು ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೇ ಖುದ್ದಾಗಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ, ಪೊಲೀಸರಿಗೆ ಲಭ್ಯವಾದ ಖಚಿತ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಜೈಲಿನಲ್ಲಿ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಸುತ್ತಿರುವುದು ಹಾಗೂ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ಆಗಾಗ್ಗೆ ಪರಿಶೀಲನೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿತ್ತು. ಕೈದಿ ಪ್ರಜ್ವಲ್ ರೇವಣ್ಣ ಮೊಬೈಲ್ ಮೂಲಕ ವಾಟ್ಸಪ್ ಕರೆ ಮಾಡುತ್ತಿದ್ದ ಪ್ರಕರಣವೂ ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ








