ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದ ತನಿಖೆಗಾಗಿ ಪ್ರಜ್ವಲ್ ರೇವಣ್ಣ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೊಬೈಲ್ ಜೈಲಿನೊಳಗೆ ಹೇಗೆ ಬಂದಿತು? ಅದನ್ನು ಯಾರು ನೀಡಿದರು? ಮೊಬೈಲ್ ಯಾರ ಹೆಸರಿನಲ್ಲಿ ಅಥವಾ ಯಾರಿಗೆ ಸೇರಿದ್ದು? ಸೇರಿದಂತೆ ಹಲವು ವಿಚಾರಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಪೊಲೀಸರ ಮನವಿ ಕುರಿತು ಸೆಪ್ಟೆಂಬರ್ 08ರಂದು ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ, ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರತಾಪ್ ಎಂಬಾತನನ್ನೂ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಇದೀಗ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿರುವ ಪೊಲೀಸರು, ಜೈಲಿನೊಳಗೆ ಮೊಬೈಲ್ ತಲುಪಿದ ರೀತಿಯ ಕುರಿತು ಮಾಹಿತಿ ಕಲೆಹಾಕಲಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಭದ್ರತಾ ವ್ಯವಸ್ಥೆಯ ನಡುವೆಯೂ ಮೊಬೈಲ್ ಹೇಗೆ ಒಳಗೆ ಪ್ರವೇಶಿಸಿತು ಎಂಬುದು ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಮೊಬೈಲ್ ಬಳಕೆಗೆ ಯಾರಾದರೂ ನೆರವು ನೀಡಿದ್ದಾರೆಯೇ, ಇದರಲ್ಲಿ ಜೈಲು ಸಿಬ್ಬಂದಿ ಅಥವಾ ಇತರರ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುವ ಸಾಧ್ಯತೆ ಇದೆ. ಎರಡು ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ವಿಚಾರಣೆ ನಡೆಸಿ ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ.








