ಮಂಡ್ಯ: ಟೀ ಡೇಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ಮಂಡ್ಯದ ಅಶೋಕ ನಗರದಲ್ಲಿ ಮುಂಜಾನೆ ಜರುಗಿದೆ.
ಇಂದು ಬೆಳಗ್ಗಿನ ಜಾವ 4.45ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಕಳೆದ ರಾತ್ರಿ ಅಂಗಡಿ ಬಂದ್ ಮಾಡುವಾಗ ಸಿಲಿಂಡರ್ ವಾಲ್ವ್ ಆಫ್ ಮಾಡಲು ಮರೆತಿರಬಹುದು ಎನ್ನಲಾಗಿದ್ದು, ರಾತ್ರಿಯಿಡೀ ಗ್ಯಾಸ್ (Gas) ಸೋರಿಕೆಯಾಗಿದೆ. ಮುಂಜಾನೆ 4.45ರ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಟೀ ಸ್ಟಾಲ್‌ನಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಕರಕಲಾಗಿವೆ.
ಅಲ್ಲದೇ ಪಕ್ಕದಲ್ಲಿದ್ದ ಟೈಲ್ಸ್ ಅಂಗಡಿಗೂ ಬೆಂಕಿ ವ್ಯಾಪಿಸಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ದುರ್ಘಟನೆಯಲ್ಲಿ ಟೀ ಸ್ಟಾಲ್‌ನಲ್ಲಿದ್ದ 3 ಫ್ರೀಜರ್‌ಗಳು, 1 ಡಬಲ್ ಸ್ಟೋರ್ ಫ್ರೀಜರ್, 15 ಟೇಬಲ್‌ಗಳು, 15 ಚೇರ್‌ಗಳು, ಫ್ಯಾನ್‌ಗಳು, ಅಡುಗೆ ಸಾಮಗ್ರಿಗಳು, ಯುಪಿಎಸ್ ಹಾಗೂ ಕಂಪ್ಯೂಟರ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಒಟ್ಟು ಅಂದಾಜು 20 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮುಂಜಾನೆ ಘಟನೆ ನಡೆದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.







