ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ಇದೀಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಅವರು, ಜೈಲು ನಿಯಮಗಳನ್ನು ಮೀರಿ ಅನುಮತಿ ಇಲ್ಲದ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ಕರೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.
ಈ ಅಕ್ರಮಕ್ಕೆ ಜೈಲು ಸಿಬ್ಬಂದಿಯೊಬ್ಬರು ನೆರವು ನೀಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ನಿಯಮಾನುಸಾರ ದೂರವಾಣಿ ಸೌಲಭ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಕೈದಿಗಳು ತಮ್ಮ ಬಳಕೆಯಲ್ಲಿರುವ ಗರಿಷ್ಠ ಮೂರು ಮೊಬೈಲ್ ಸಂಖ್ಯೆಗಳನ್ನು ಜೈಲು ಆಡಳಿತಕ್ಕೆ ನೋಂದಾಯಿಸಬೇಕು. ಪರಿಶೀಲನೆ ಬಳಿಕ ಅನುಮೋದನೆ ಪಡೆದ ಸಂಖ್ಯೆಗಳಿಗಷ್ಟೇ ಕರೆ ಮಾಡುವ ಅವಕಾಶವಿರುತ್ತದೆ.
ಆದರೆ, ಪ್ರದೋಷ್ ವಿಚಾರದಲ್ಲಿ ಈ ವ್ಯವಸ್ಥೆಯನ್ನು ತಪ್ಪಾಗಿ ಬಳಸಿಕೊಂಡಿರುವ ಆರೋಪವಿದೆ. ಜೈಲು ಸಿಬ್ಬಂದಿ ಮೌನೇಶ್ ಹೆಚ್. ಕೋರಿ ಅವರ ಸಹಕಾರದಿಂದ ಮತ್ತೊಬ್ಬ ಕೈದಿಯ ಹೆಸರಿನಲ್ಲಿ ನೋಂದಾಯಿಸಿದ್ದ ಸಂಖ್ಯೆಯನ್ನು ಪ್ರದೋಷ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆ ಸಂಖ್ಯೆಯನ್ನು ವಕೀಲರ ಸಂಪರ್ಕ ಸಂಖ್ಯೆ ಎಂದು ದಾಖಲಿಸಿ, ಅದೇ ಮೂಲಕ ಪತ್ನಿಯೊಂದಿಗೆ ಖಾಸಗಿ ಮಾತುಕತೆ ನಡೆಸುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಕೈದಿಗಳ ದೂರವಾಣಿ ಬಳಕೆಯ ಮೇಲ್ವಿಚಾರಣೆ ವೇಳೆ ಅನುಮಾನಾಸ್ಪದ ಸಂಪರ್ಕದ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಬಳಿಕ ನಡೆಸಿದ ಆಂತರಿಕ ಪರಿಶೀಲನೆಯಲ್ಲಿ ನಿಯಮ ಉಲ್ಲಂಘನೆಯ ಮಾಹಿತಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಜೈಲು ಸಿಬ್ಬಂದಿ ಮೌನೇಶ್ ಹೆಚ್. ಕೋರಿ ಮತ್ತು ಆರೋಪಿ ಪ್ರದೋಷ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಜೈಲು ಸಿಬ್ಬಂದಿಯ ಪಾತ್ರವೇನು, ಅನುಮತಿ ಇಲ್ಲದ ಸಂಖ್ಯೆಯಿಂದ ಎಷ್ಟು ಕರೆಗಳನ್ನು ಮಾಡಲಾಗಿದೆ ಮತ್ತು ಈ ಅಕ್ರಮದಲ್ಲಿ ಬೇರೆಯವರ ಪಾತ್ರವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕರೆಗಳ ವಿವರಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುವ ಕಾರ್ಯವೂ ಮುಂದುವರಿದಿದೆ.








