ವೈದ್ಯಕೀಯ ಪದವಿ ಅಥವಾ ಮಾನ್ಯತೆ ಪಡೆದ ಪರವಾನಗಿ ಇಲ್ಲದಿದ್ದರೂ ಅಕ್ರಮವಾಗಿ ಕ್ಲಿನಿಕ್ (ಚಿಕಿತ್ಸಾಲಯ) ನಡೆಸುತ್ತಿದ್ದ ಯುವಕನನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.ಅದ್ನಾನ್ ಬಂಧಿತ ಆರೋಪಿ. ದ್ವಿತೀಯ ಪಿಯುಸಿ ಮುಗಿಸಿದ್ದ ಈತ ವೈದ್ಯಕೀಯ ವಿದ್ಯಾರ್ಹತೆ ಇಲ್ಲದಿದ್ದರೂ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ ಗೋಲ್ಕೊಂಡ ಪ್ರದೇಶದಲ್ಲಿರುವ ಯುನಾನಿ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಹಾಯಕ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ ಅದ್ನಾನ್, ಕಾಲಕ್ರಮೇಣ ತಾನೇ ನೇರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಅದ್ನಾನ್, ಆತನ ತಾಯಿ ಸಬಾ ಖಾನ್ ಮತ್ತು ಸಹೋದರ ಮೊಹಮ್ಮದ್ ಫೈಜಾನ್ ಸೇರಿಕೊಂಡು ತಮ್ಮನ್ನು ತಾವು ಪಾರಂಪರಿಕ ವೈದ್ಯರೆಂದು (ಹಕೀಮ್) ರೋಗಿಗಳ ಬಳಿ ಪರಿಚಯಿಸಿಕೊಳ್ಳುತ್ತಿದ್ದರು. ಲೈಂಗಿಕ ಸಮಸ್ಯೆ, ಉಸಿರಾಟದ ತೊಂದರೆ, ಎದೆನೋವು, ವಾಂತಿ, ಮೈಕೈ ನೋವು, ಮೂತ್ರಪಿಂಡ ಮತ್ತು ಮೂತ್ರಕೋಶ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ರೋಗಿಗಳಿಗೆ ಚಿಕಿತ್ಸಾ ಚೀಟಿ ಬರೆದುಕೊಡುತ್ತಿದ್ದರು ಹಾಗೂ ಯಾವುದೇ ಹೆಸರಿಲ್ಲದ ಔಷಧಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುನರ್ವಾ ಬೇಗಂ (ಯುನಾನಿ) ಎಂಬುವವರ ಪರಿಚಯ ಮಾಡಿಕೊಂಡಿದ್ದ ಅದ್ನಾನ್, ಆಗಾಗ ನಮ್ಮ ಕ್ಲಿನಿಕ್‌ಗೆ ಬರುವಂತೆ ಅವರಲ್ಲಿ ಕೇಳಿಕೊಂಡಿದ್ದ. ಇದಕ್ಕಾಗಿ ತಿಂಗಳಿಗೆ ₹13,000 ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ವೈದ್ಯರ ಅನುಪಸ್ಥಿತಿಯಲ್ಲಿ ಇವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಕ್ಲಿನಿಕ್ ಬಗ್ಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡುತ್ತಿದ್ದರು.
ಅದ್ನಾನ್ ತಾಯಿ ಹಾಗೂ ಸಹೋದರನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅವರಿಬ್ಬರೂ ತಲೆಮರೆಸಿಕೊಂಡಿದ್ದು ಪತ್ತೆಗೆ ಬಲೆ ಬೀಸಲಾಗಿದೆ. ಅದ್ನಾನ್‌ನನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







