ಮಂಗಳೂರು/ಕಡಬ : ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಗೆ ಹಾಜರಾಗಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹಾಗೂ ಡಿಜಿಟಲ್ ಎಡಿಟಿಂಗ್ ಬಳಸಿ ನಕಲಿ ಪ್ರವೇಶ ಪತ್ರ ಸೃಷ್ಟಿಸಿದ ಕಡಬ ಮೂಲದ ಯುವಕನೊಬ್ಬನನ್ನು ಮಂಗಳೂರು ನಗರದ ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಯಜ್ಞೇಶ್ ಬಿ.ಜೆ. ರೈ (22) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ–2026ರ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯು ಸೆಪ್ಟೆಂಬರ್ 28ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿತ್ತು. ಈ ವೇಳೆ ನೋಂದಣಿ ಡೆಸ್ಕ್‌ನಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಸಿಬ್ಬಂದಿ ಪರಿಶೀಲಿಸುತ್ತಿದ್ದರು. ಆರೋಪಿ ಯಜ್ಞೇಶ್ ರೈ CPC5225446 ಸಂಖ್ಯೆಯ ಪ್ರವೇಶ ಪತ್ರವನ್ನು ಹಾಜರುಪಡಿಸಿದ್ದನು. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒದಗಿಸಿದ್ದ ತಂತ್ರಾಂಶದಲ್ಲಿ ಪರಿಶೀಲಿಸಿದಾಗ, 1:5 ಅರ್ಹತಾ ಪಟ್ಟಿಯಲ್ಲಿ ಈತನ ಹೆಸರಾಗಲಿ ಅಥವಾ ಅರ್ಜಿ ಸಂಖ್ಯೆಯಾಗಲಿ ಕಂಡುಬರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ದಾಖಲೆಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಪ್ರವೇಶ ಪತ್ರ ಎಂಬುದು ಬಯಲಿಗೆ ಬಂದಿದೆ.
ಪೊಲೀಸರ ತನಿಖೆಯಲ್ಲಿ, ಯಜ್ಞೇಶ್ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆಯದೇ ಇರುವುದು ಬೆಳಕಿಗೆ ಬಂದಿದೆ. ಆದಾಗ್ಯೂ ದೈಹಿಕ ಪರೀಕ್ಷೆಗೆ ಹಾಜರಾಗುವ ದುರುದ್ದೇಶದಿಂದ, ಅರ್ಹತೆ ಪಡೆದಿದ್ದ ಮತ್ತೊಬ್ಬ ಅಭ್ಯರ್ಥಿಯ ಅಸಲಿ ಹಾಲ್‌ಟಿಕೆಟ್ ಪಡೆದುಕೊಂಡಿದ್ದನು. ನಂತರ ಎಐ ಬಳಸಿ ಅದಲ್ಲಿದ್ದ ಹೆಸರು ಹಾಗೂ ವಿವರಗಳನ್ನು ಬದಲಾಯಿಸಿ, ತನ್ನ ಹೆಸರಿಗೆ ನಕಲಿ ಹಾಲ್‌ಟಿಕೆಟ್ ಸಿದ್ಧಪಡಿಸಿಕೊಂಡಿದ್ದನು.
ಆರೋಪಿಯ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ನಕಲಿ ಹಾಲ್‌ಟಿಕೆಟ್ ಸೃಷ್ಟಿಸಲು ಬಳಸಿದ ಡಿಜಿಟಲ್ ಪುರಾವೆಗಳು ಹಾಗೂ ಎಡಿಟಿಂಗ್ ಪ್ರಕ್ರಿಯೆಯ ಮಾಹಿತಿಗಳು ಪತ್ತೆಯಾಗಿವೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಪ್ರಕಾಶ್ ರುದ್ರಪ್ಪ ಹೂವಿನ ಅವರು ನೀಡಿದ ದೂರಿನ ಆಧಾರದ ಮೇಲೆ ಬರ್ಕೆ ಪೊಲೀಸ್ ಠಾಣೆಯಲ್ಲಿ (ಅ.ಕ್ರ. 87/2026) ಪ್ರಕರಣ ದಾಖಲಾಗಿದೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)–2023ರ ಕಲಂ 336(1), 336(3) ಹಾಗೂ 318(4) ರ ಅಡಿ ನಕಲಿ ದಾಖಲೆ ಸೃಷ್ಟಿ ಮತ್ತು ವಂಚನೆ ಪ್ರಕರಣ ದಾಖಲಿಸಲಾಗಿದೆ.
ನಕಲಿ ಹಾಲ್‌ಟಿಕೆಟ್‌ನ ಪ್ರಿಂಟ್‌ಔಟ್ ಪಡೆದ ಸ್ಥಳವನ್ನು ಪತ್ತೆಹಚ್ಚಲು ಬರ್ಕೆ ಠಾಣೆಯ ತನಿಖಾ ತಂಡವು ಕಡಬಕ್ಕೆ ಭೇಟಿ ನೀಡಿ, ಸ್ಥಳೀಯ ಸೈಬರ್/ಜೆರಾಕ್ಸ್ ಅಂಗಡಿಯೊಂದರಲ್ಲಿ ಪರಿಶೀಲನೆ ಹಾಗೂ ಮಹಜರು ನಡೆಸಿದೆ. ಈ ಕೃತ್ಯದಲ್ಲಿ ಇತರರ ಪಾತ್ರವಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ. ನ್ಯಾಯಾಲಯಕ್ಕೆ ಹಾಜರು: ಬಂಧಿತ ಯಜ್ಞೇಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಬರ್ಕೆ ಠಾಣಾ ಪೊಲೀಸರು ಮುಂದುವರಿಸಿದ್ದಾರೆ.








