ಉಡುಪಿ/ಕೋಟ : ಬೆಳೆ ರಕ್ಷಣೆಗಾಗಿ ಪಡೆದಿದ್ದ ಬಂದೂಕಿಗೆ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ, ನಿಯಮ ಉಲ್ಲಂಘಿಸಿ ಹೆಚ್ಚುವರಿ ಟೆಲಿಸ್ಕೋಪ್ ಹಾಗೂ ಬೈನಾಕುಲರ್ ಅಳವಡಿಸಿ ಮಾರ್ಪಾಡು ಮಾಡಿದ ಆರೋಪದ ಮೇಲೆ ಬಂದೂಕು ಪರವಾನಿಗೆದಾರನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಒಲಿಕಲ್ ನಿವಾಸಿ ಫೆಡ್ರಿಕ್ ಡಿ’ಕ್ರೂಸ್ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ.
ಆರೋಪಿ ಫೆಡ್ರಿಕ್ ಡಿ’ಕ್ರೂಸ್ ಅವರು ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬೆಳೆ ರಕ್ಷಣೆಗಾಗಿ NPB ರೈಫಲ್ (ಸಂಖ್ಯೆ: F434139, ಲೈಸನ್ಸ್ ನಂ: UD/KND/126/3/5, ಫಾರಂ V) ಪರವಾನಿಗೆ ಹೊಂದಿದ್ದು, ಈ ಲೈಸನ್ಸ್ 16/01/2028 ರವರೆಗೆ ಊರ್ಜಿತದಲ್ಲಿದೆ. ಈ ರೈಫಲ್ ಅನ್ನು ಆರೋಪಿಯು ಕೋಟ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇರಿಸಿದ್ದರು.
ಆಗಸ್ಟ್ 26, 2026 ರಂದು ಉಡುಪಿ ಜಿಲ್ಲಾ ಸಶಸ್ತ್ರ ವಿಭಾಗದ ಅಧಿಕಾರಿಗಳು ಕೋಟ ಠಾಣೆಗೆ ಆಗಮಿಸಿ, ಠಾಣೆಯಲ್ಲಿ ಡೆಪಾಸಿಟ್ ಇರಿಸಲಾಗಿದ್ದ ಸಾರ್ವಜನಿಕರ ಬಂದೂಕುಗಳ ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿ ಫೆಡ್ರಿಕ್ ಅವರಿಗೆ ಸೇರಿದ NPB ರೈಫಲ್ ಅನ್ನು ಪರಿಶೀಲಿಸಿದಾಗ, ಅದಕ್ಕೆ ಹೆಚ್ಚುವರಿಯಾಗಿ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿರುವುದು ಪತ್ತೆಯಾಗಿದೆ.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ನೀಡಿದ ದೂರಿನ ಆಧಾರದ ಮೇಲೆ, ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿ ಫೆಡ್ರಿಕ್ ಡಿ’ಕ್ರೂಸ್ ವಿರುದ್ಧ ಅಪರಾಧ ಕ್ರಮಾಂಕ 150/2026 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959 ರ ಕಲಂ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.








