ತೂತುಕುಡಿ: ಸಾತಂಕುಳಂ ಮೂಲಕ ಸಾಗುವ ಆಳ್ವಾರ್‌ತಿರುನಗರಿ-ವಳ್ಳಿಯೂರು ರಾಜ್ಯ ಹೆದ್ದಾರಿ 93 ರಸ್ತೆಯಲ್ಲಿನ ಫಲಕದಲ್ಲಿ ಹಿಂದಿ ಭಾಷೆ ಬಳಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಶುಕ್ರವಾರ ಹಿಂದಿ ಹೆಸರುಗಳನ್ನು ಫಲಕದಿಂದ ಅಳಿಸಲಾಗಿದ್ದು, ಈ ಸಂಬಂಧ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ರಾಜ್ಯ ಹೆದ್ದಾರಿ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗವು ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (ಸಿಆರ್‌ಐಎಫ್) ಅಡಿಯಲ್ಲಿ ಸಾತಂಕುಳಂ ಮೂಲಕ ಸಾಗುವ ಆಳ್ವಾರ್‌ತಿರುನಗರಿ-ವಳ್ಳಿಯೂರು ಎಸ್‌ಹೆಚ್93 ರಸ್ತೆಯನ್ನು ಅಭಿವೃದ್ಧಿಪಡಿಸಿತ್ತು. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ, ಸಾತಂಕುಳಂ ಹೊರವಲಯದ ವಳ್ಳಿಯಮ್ಮಾಳಪುರಂನಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗವು ಫಲಕವೊಂದನ್ನು ಅಳವಡಿಸಿತ್ತು. ಈ ಫಲಕದಲ್ಲಿ ಸ್ಥಳಗಳ ಹೆಸರುಗಳಿಗೆ ತಮಿಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಳಸಲಾಗಿತ್ತು.
ಫಲಕದಲ್ಲಿ ಹಿಂದಿ ಹೆಸರುಗಳನ್ನು ಬಳಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪರ-ವಿರೋಧ ವ್ಯಕ್ತವಾಗಿತ್ತು. ಇನ್ನು ಹಿಂದಿ ಬಳಕೆಯನ್ನು ಖಂಡಿಸಿ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ‘ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರವೇ ಇದೀಗ ಅದೇ ಕೆಲಸ ಮಾಡುತ್ತಿದೆ. ವಿರೋಧ ವ್ಯಕ್ತವಾದಾಗ ಜನರ ನಾಡಿಮಿಡಿತವನ್ನು ಪರೀಕ್ಷಿಸಿ, ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವುದೇ ಟಿವಿಕೆ ನೇತೃತ್ವದ ತಮಿಳುನಾಡು ಸರ್ಕಾರದ ನಡೆ. ತಮಿಳುನಾಡಿನ ದ್ವಿಭಾಷಾ ನೀತಿಯೇ ರಾಜ್ಯದ ಶಾಶ್ವತ ನೀತಿಯಾಗಿದೆ. ತಮಿಳುನಾಡಿನ ವಿಶಿಷ್ಟ ದ್ವಿಭಾಷಾ ನೀತಿಯೊಂದಿಗೆ ಚೆಲ್ಲಾಟವಾಡದಂತೆ’ ಟಿವಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ವಿರೋಧದ ಬೆನ್ನಲ್ಲೇ ರಾಜ್ಯ ಹೆದ್ದಾರಿ ಇಲಾಖೆಯು ಅ.1 ಮತ್ತು 2ರಂದು ಫಲಕದಲ್ಲಿದ್ದ ಹಿಂದಿ ಪದಗಳನ್ನು ಅಳಿಸಿತು. ಯೋಜನೆಯ ಸಹಾಯಕ ನಿರ್ದೇಶಕ ಭೂಮಿನಾಥನ್ ಮತ್ತು ಸಹಾಯಕ ಇಂಜಿನಿಯರ್ ಮುತ್ತುಲಕ್ಷ್ಮಿ, ಫಲಕದಲ್ಲಿ ಹಿಂದಿ ಪದಗಳನ್ನು ಬಳಸಿರುವ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲು ವಿಫಲರಾದ ಹಿನ್ನೆಲೆ ಅವರಿಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ರಾಜ್ಯ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.








