ಕಳ್ಳತನ ಮಾಡಿದ್ದ ಚಿನ್ನದ ಸರವನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನುಂಗಿದ್ದ ಆರೋಪಿಯಿಂದ ಅದನ್ನು ಹೊರತೆಗೆಯಲು ಮುಂಬೈ ಪೊಲೀಸರು ವಿಶಿಷ್ಟ ರೀತಿಯ ಕ್ರಮ ಕೈಗೊಂಡಿದ್ದಾರೆ. ಆರೋಪಿಗೆ 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿ, ಕೊನೆಗೆ ಚಿನ್ನದ ಸರವನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಸರವನ್ನು ಸ್ವಚ್ಛಗೊಳಿಸಿ ಸಂತ್ರಸ್ತ ಮಹಿಳೆಗೆ ಹಿಂತಿರುಗಿಸಲಾಗಿದೆ.
ಮುಂಬೈನ ರಸ್ತೆಯೊಂದರಲ್ಲಿ ಮಹಿಳೆಯ ಚಿನ್ನದ ಸರ ಕಸಿದುಕೊಂಡ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಕಳ್ಳತನವನ್ನು ಒಪ್ಪಿಕೊಳ್ಳಲು ಆತ ನಿರಾಕರಿಸಿದ್ದ. ಬಂಧಿಸುವ ಸಂದರ್ಭದಲ್ಲಿ ತನ್ನ ಬಳಿ ಇದ್ದ ಚಿನ್ನದ ಸರವನ್ನು ಪೊಲೀಸರಿಗೆ ಸಿಗದಂತೆ ಮಾಡಲು ಆತ ಅದನ್ನು ನುಂಗಿದ್ದಾನೆ ಎಂದು ವರದಿಯಾಗಿದೆ.
ನಂತರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಎಕ್ಸ್ರೇನಲ್ಲಿ ಚಿನ್ನದ ಸರ ಆತನ ಹೊಟ್ಟೆಯಲ್ಲಿರುವುದು ಪತ್ತೆಯಾಗಿದೆ. ಸರವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ಸೂಚಿಸಿದ್ದರು.
ಶಸ್ತ್ರಚಿಕಿತ್ಸೆ ಬದಲು ಬಾಳೆಹಣ್ಣಿನ ಮೊರೆ
ಶಸ್ತ್ರಚಿಕಿತ್ಸೆ ದುಬಾರಿಯಾಗುವುದರ ಜೊತೆಗೆ ಅಪಾಯವೂ ಇರಬಹುದೆಂದು ಪರಿಗಣಿಸಿದ ಪೊಲೀಸರು, ಬೇರೆ ಮಾರ್ಗದಲ್ಲಿ ಸರವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಮೊದಲು ಎನಿಮಾ ಮೂಲಕ ಸರ ಹೊರತೆಗೆಯುವ ಪ್ರಯತ್ನ ನಡೆದರೂ ಅದು ಯಶಸ್ವಿಯಾಗಲಿಲ್ಲ.
ಕೊನೆಗೆ ಆರೋಪಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಳೆಹಣ್ಣುಗಳನ್ನು ತಿನ್ನಿಸುವ ವಿಧಾನ ಅನುಸರಿಸಲಾಯಿತು. ಒಂದೇ ದಿನದಲ್ಲಿ 40ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ನೀಡಲಾಗಿದ್ದು, ಸರ ಹೊರಬರದ ಹಿನ್ನೆಲೆಯಲ್ಲಿ ಇನ್ನಷ್ಟು ಬಾಳೆಹಣ್ಣುಗಳನ್ನು ತಿನ್ನಿಸಲಾಗಿದೆ.
ಅಂತಿಮವಾಗಿ ಚಿನ್ನದ ಸರ ಆರೋಪಿಯ ಮಲದೊಂದಿಗೆ ಹೊರಬಂದಿದೆ. ಪೊಲೀಸರು ಅದನ್ನು ಸ್ವಚ್ಛಗೊಳಿಸಿ ಸೋಂಕು ನಿವಾರಣೆ ಮಾಡಿದ ಬಳಿಕ ಸಂತ್ರಸ್ತ ಮಹಿಳೆಗೆ ಮರಳಿಸಿದ್ದಾರೆ ಎಂದು ವರದಿಯಾಗಿದೆ.
ಚಿನ್ನಾಭರಣಗಳನ್ನು ನುಂಗಿದ ಆರೋಪಿಗಳಿಂದ ಆಭರಣಗಳನ್ನು ಮರಳಿ ಪಡೆಯಲು ಮುಂಬೈ ಪೊಲೀಸರು ಇಂತಹ ವಿಧಾನ ಅನುಸರಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಮತ್ತೊಂದು ಪ್ರಕರಣದಲ್ಲಿ ಆರೋಪಿಗೆ ಎರಡು ಡಜನ್ಗೂ ಹೆಚ್ಚು ಬಾಳೆಹಣ್ಣುಗಳ ಜೊತೆಗೆ ವಿರೇಚಕಗಳನ್ನು ಬೆರೆಸಿದ ಹಾಲು ನೀಡಲಾಗಿತ್ತು. ಆ ಮೂಲಕ ನುಂಗಿದ್ದ ಚಿನ್ನದ ಸರವನ್ನು ಹೊರತೆಗೆಯಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ ದೊಡ್ಡ ಪೆಂಡೆಂಟ್ ಹೊಂದಿದ್ದ ಚಿನ್ನದ ಸರವನ್ನು ನುಂಗಿದ್ದ ಆರೋಪಿಗೆ ಸುಮಾರು ಐದು ಡಜನ್ ಬಾಳೆಹಣ್ಣುಗಳನ್ನು ನೀಡಲಾಗಿತ್ತು. ಬಳಿಕ ಆಭರಣ ಹೊರಬಂದಿತ್ತು. ಆದರೆ ಸರವನ್ನು ಮರಳಿ ಪಡೆದ ಸಂತ್ರಸ್ತರು ಅದನ್ನು ನೇರವಾಗಿ ಮುಟ್ಟಲು ಅಸಹ್ಯಪಟ್ಟು, ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಆಭರಣ ವ್ಯಾಪಾರಿಯ ಬಳಿಗೆ ಕೊಂಡೊಯ್ದಿದ್ದರು ಎಂದು ವರದಿಯಾಗಿದೆ.








