ವಿಶಾಖಪಟ್ಟಣಂ: ನೃತ್ಯ ಕಾರ್ಯಕ್ರಮಕ್ಕಾಗಿ ವಿಶಾಖಪಟ್ಟಣಕ್ಕೆ ಆಗಮಿಸಿ, ಬಳಿಕ ತವರಿಗೆ ಮರಳುತ್ತಿದ್ದ ಅಸ್ಸಾಂ ಮೂಲದ 20 ವರ್ಷದ ಕಾಲೇಜು ವಿದ್ಯಾರ್ಥಿನಿ ಹಾಗೂ ಬುಡಕಟ್ಟು ನೃತ್ಯಗಾರ್ತಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ರೈಲ್ವೆ ಹಳಿಯ ಪಕ್ಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ‘ರೈಲಿನಲ್ಲಿ ಜನಸಂದಣಿ ಹೆಚ್ಚಿದ್ದು, ಸುತ್ತಲೂ ಪುರುಷರೇ ತುಂಬಿರುವುದರಿಂದ ಭಯವಾಗುತ್ತಿದೆ’ ಎಂದು ಆಕೆ ಕುಟುಂಬಕ್ಕೆ ನೀಡಿದ ಕೊನೆಯ ಸಂದೇಶದ ಬಳಿಕ ಈ ದುರಂತ ಸಂಭವಿಸಿರುವುದು ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೃತ ಯುವತಿಯನ್ನು ಅಸ್ಸಾಂನ ಕಾಮರೂಪ ಜಿಲ್ಲೆಯ ನಿವಾಸಿ ಹಾಗೂ ಗುವಾಹಟಿಯ ಬಿ. ಬರೂಹ್ ಕಾಲೇಜಿನ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.
ನೃತ್ಯ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ಬಂದಿದ್ದ ಯುವತಿಯು, ಅಕ್ಟೋಬರ್ 10 ರಂದು ಗುವಾಹಟಿಯಲ್ಲಿ ಬ್ಯಾಂಕ್ ಪರೀಕ್ಷೆ ಇದ್ದಿದ್ದರಿಂದ ಮನೆಗೆ ಮರಳಲು ನಿರ್ಧರಿಸಿದ್ದರು. ಅಕ್ಟೋಬರ್ 5 ರಂದು ಆನ್ಲೈನ್ನಲ್ಲಿ ‘ತತ್ಕಾಲ್’ ಟಿಕೆಟ್ ಬುಕ್ ಮಾಡಲು ಯತ್ನಿಸಿದರೂ ಕನ್ಫರ್ಮ್ ಆಗಿರಲಿಲ್ಲ. ಹೀಗಾಗಿ ಅಕ್ಟೋಬರ್ 5 ರ ರಾತ್ರಿ ವಿಶಾಖಪಟ್ಟಣಂ ರೈಲು ನಿಲ್ದಾಣ ತಲುಪಿ, ಅಸ್ಸಾಂ ಕಡೆಗೆ ತೆರಳುವ ದಿಬ್ರುಗಢ ವಿವೇಕ್ ಎಕ್ಸ್ಪ್ರೆಸ್ (ರೈಲು ಸಂಖ್ಯೆ 22503) ಜನರಲ್/ಸ್ಲೀಪರ್ ಕೋಚ್ ಹತ್ತಿದ್ದರು. ತಾಯಿಯ ದೂರಿನ ಪ್ರಕಾರ, ರಾತ್ರಿ 11:50 ಕ್ಕೆ ರೈಲು ಹತ್ತಿದ್ದ ಆಕೆ, ಅಕ್ಟೋಬರ್ 7 ರ ಬೆಳಿಗ್ಗೆ ಗುವಾಹಟಿ ತಲುಪಬೇಕಿತ್ತು.
ಪ್ರಯಾಣದ ವೇಳೆ ಕೋಚ್ನಲ್ಲಿ ಅತಿಯಾದ ಜನಸಂದಣಿ ಇದ್ದು, ತನ್ನ ಸುತ್ತಲೂ ಪುರುಷ ಪ್ರಯಾಣಿಕರೇ ಆವರಿಸಿಕೊಂಡಿದ್ದರಿಂದ ತೀವ್ರ ಭಯವಾಗುತ್ತಿದೆ ಎಂದು ಯುವತಿಯು ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಕೊನೆಯ ಬಾರಿ ಸಂದೇಶ ಕಳುಹಿಸಿದ್ದರು. ಅಕ್ಟೋಬರ್ 6 ರ ಬೆಳಗಿನ ಜಾವದವರೆಗೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದ ಆಕೆಯ ಮೊಬೈಲ್, ನಂತರ ಸಂಪೂರ್ಣವಾಗಿ ಸ್ವಿಚ್ ಆಫ್ ಆಗಿದೆ.
ಆತಂಕಗೊಂಡ ತಾಯಿ ಗುವಾಹಟಿಯ ಸರ್ಕಾರಿ ರೈಲ್ವೆ ಪೊಲೀಸರಿಗೆ , ‘ರೈಲ್ಮದದ್ 139’ ಸಹಾಯವಾಣಿಗೆ ಹಾಗೂ ಅಸ್ಸಾಂ ಪೊಲೀಸರಿಗೆ ದೂರು ನೀಡಿ ಮಗಳನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಆರ್ಪಿಎಫ್ ಕಾರ್ಯಾಚರಣೆ ಆರಂಭಿಸಿದ್ದು, ರೈಲಿನ S2 ಕೋಚ್ನಲ್ಲಿ ಯುವತಿಯ ಬ್ಯಾಗ್ ಹಾಗೂ ವೈಯಕ್ತಿಕ ವಸ್ತುಗಳು ಪತ್ತೆಯಾಗಿದ್ದವು. ಆದರೆ ಯುವತಿ ಪತ್ತೆಯಾಗಿರಲಿಲ್ಲ. ತೀವ್ರ ಹುಡುಕಾಟದ ಬಳಿಕ, ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಲಯಪುರಂ ಅರಣ್ಯ ಪ್ರದೇಶದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಆಕೆಯ ಶವ ಪತ್ತೆಯಾಗಿದೆ.
ಯುವತಿ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾಳೆಯೇ ಅಥವಾ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ತಳ್ಳಿ ಕೊಲೆ ಮಾಡಲಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಫೋರೆನ್ಸಿಕ್ ವರದಿ ಬಂದ ಬಳಿಕ ಸಾವಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ. ಇದಲ್ಲದೆ, ವಿಶಾಖಪಟ್ಟಣಂ ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ಆಕೆಯೊಂದಿಗೆ ಕಾಣಿಸಿಕೊಂಡಿದ್ದ ಅಪರಿಚಿತ ವ್ಯಕ್ತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಪ್ರಕರಣದಲ್ಲಿ ಆತನ ಪಾತ್ರವೇನಾದರೂ ಇದೆಯೇ ಎಂಬುದನ್ನು ಪತ್ತೆಹಚ್ಚಲು ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.








