ಚೆನ್ನೈ: ಸ್ನೇಹಿತರೇ, ಇನ್ನು ತಡೆಯಲು ಆಗುತ್ತಿಲ್ಲ, ದಯವಿಟ್ಟು ನಿಲ್ಲಿಸಿ!” — ಇದು ತಮಿಳುನಾಡಿನ ಇನ್ಸ್ಟಾಗ್ರಾಮ್ನಲ್ಲಿ ಜನಪ್ರಿಯರಾಗಿರುವ ವೀರಮಣಿ ಅವರ ಅಳಲು. ಉಚಿತವಾಗಿ ಒಂದು ಸ್ವೀಟ್ ಬಾಕ್ಸ್ ಕೇಳಿದ್ದಕ್ಕೆ, ಇದೀಗ ಅವರ ಮನೆಗೆ ನೂರಾರು ವಸ್ತುಗಳ ಆರ್ಡರ್ಗಳು ಹರಿದುಬಂದಿದ್ದು, ಇಂಟರ್ನೆಟ್ನಲ್ಲಿ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ದಿನನಿತ್ಯದ ಘಟನೆಗಳ ಬಗ್ಗೆ ಮಾತನಾಡುತ್ತಾ, ತಮ್ಮದೇ ಶೈಲಿಯಲ್ಲಿ ಇತರರನ್ನು ಟೀಕಿಸುವ ಮೂಲಕ ವೀರಮಣಿ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಕೇರಳ ಪ್ರವಾಸಕ್ಕೆ ತೆರಳಲು ತನ್ನ ಫಾಲೋವರ್ಸ್ ಗಳಿಂದ ಹಣದ ಸಹಾಯ ಕೋರಿದ್ದರು. ಇದಕ್ಕಾಗಿ ಕ್ಯೂಆರ್ ಕೋಡ್ ಹಂಚಿಕೊಂಡಿದ್ದ ಅವರು, ಸುಮಾರು ₹6,000 ಹಣ ಸಂಗ್ರಹವಾಗಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದರು. ಕೆಲವರು ಕೇವಲ ₹1 ಕಳುಹಿಸಿದ್ದನ್ನೂ ಅವರು ಉಲ್ಲೇಖಿಸಿದ್ದರು.ಬಳಿಕ ಪ್ರವಾಸಕ್ಕೆ ತೆರಳಿದ ವಿಡಿಯೋವನ್ನೂ ಹಂಚಿಕೊಂಡಿದ್ದರು.
ಇದಾದ ಬಳಿಕ ವೀರಮಣಿ, “ಸ್ನೇಹಿತರೇ, ಸ್ವೀಟ್ ಆರ್ಡರ್ ಮಾಡಿ” ಎಂದು ಹೇಳಿ ತಮ್ಮ ಮನೆಯ ವಿಳಾಸವನ್ನು ಹಂಚಿಕೊಂಡಿದ್ದರು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕೆಲವು ನೆಟ್ಟಿಗರು, ಅವರ ಮನೆಗೆ ವಿವಿಧ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ (COD) ಮೂಲಕ ಆರ್ಡರ್ ಮಾಡಲು ಆರಂಭಿಸಿದ್ದಾರೆ. ಮೊದಲಿಗೆ ಹಾಲಿನ ಪ್ಯಾಕೆಟ್ಗಳ ಆರ್ಡರ್ ಬಂದಿತ್ತು. ಆದರೆ ತಾವು ಆರ್ಡರ್ ಮಾಡಿಲ್ಲ ಎಂದು ಮನೆಯವರು ತಿಳಿಸಿದಾಗ, ಡೆಲಿವರಿ ಸಿಬ್ಬಂದಿ ವಸ್ತುಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ನಂತರ ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ವಿವಿಧ ಆನ್ಲೈನ್ ಶಾಪಿಂಗ್ ವೇದಿಕೆಗಳ ಮೂಲಕ ಟಿವಿ, ಫ್ರಿಜ್ ಸೇರಿದಂತೆ ದುಬಾರಿ ವಸ್ತುಗಳ ಆರ್ಡರ್ಗಳೂ ಮನೆಗೆ ಬಂದಿವೆ ಎಂದು ವರದಿಯಾಗಿದೆ.
ಒಂದು ಹಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತ ದೊಡ್ಡ ವಾಹನವೇ ಮನೆ ಮುಂದೆ ಬಂದಿರುವುದನ್ನು ಕಂಡು ವೀರಮಣಿ ಆತಂಕಗೊಂಡಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ಅವರು, “ತಿಳಿಯದೆ ಒಂದು ಸ್ವೀಟ್ ಬಾಕ್ಸ್ ಕೇಳಿದ್ದೆ, ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ.
ಇನ್ನೂ ಕೆಲವರು ವೀರಮಣಿ ಮನೆಗೆ ಯುದ್ದ ಟ್ಯಾಂಕರ್ ಆರ್ಡರ್ ಮಾಡಿದ್ದಾರೆ ಎಂಬಂತೆ ಎಡಿಟ್ ಮಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ 500ಕ್ಕೂ ಹೆಚ್ಚು ಆರ್ಡರ್ಗಳು ಬಂದಿರುವುದಾಗಿ ವರದಿಯಾಗಿದ್ದು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿಯದೆ ವೀರಮಣಿ ಪರದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯಾಗಿ ಆರಂಭವಾದ ಈ ಘಟನೆ, ಮತ್ತೊಬ್ಬರ ಹೆಸರಿನಲ್ಲಿ ಸುಳ್ಳು ಆರ್ಡರ್ಗಳನ್ನು ನೀಡುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.








