ಮಂಗಳೂರು : ಫೇಸ್ಬುಕ್ನಲ್ಲಿ ಬಂದ ಆಕರ್ಷಕ ಜಾಹೀರಾತೊಂದನ್ನು ನಂಬಿ ಆನ್ಲೈನ್ ಮೂಲಕ ಸೀನಿಯರ್ ಸಿಟಿಜನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಮುಂದಾದ 68 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಸೈಬರ್ ವಂಚಕರು 1 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ದೂರುದಾರರಾದ 68 ವರ್ಷದ ಕೃಷಿಕರೊಬ್ಬರು ಕಳೆದ ಅಕ್ಟೋಬರ್ 4 ರಂದು ತಮ್ಮ ಮೊಬೈಲ್ನಲ್ಲಿ ಫೇಸ್ಬುಕ್ ವೀಕ್ಷಿಸುತ್ತಿದ್ದಾಗ, ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಸುಲಭವಾಗಿ ಸೀನಿಯರ್ ಸಿಟಿಜನ್ ಕಾರ್ಡ್ ಪಡೆದುಕೊಳ್ಳಬಹುದು ಎಂಬ ಜಾಹೀರಾತನ್ನು ಕಂಡಿದ್ದರು.
ನಂತರ ಅಕ್ಟೋಬರ್ 6 ರಂದು ಪುನಃ ಅದೇ ಜಾಹೀರಾತನ್ನು ನೋಡಿ ಅದರ ಮೇಲೆ ಕ್ಲಿಕ್ ಮಾಡಿದ್ದಾರೆ. ಅಂದೇ ಮಧ್ಯಾಹ್ನ 1:30 ರ ಸುಮಾರಿಗೆ 7207717431 ಮೊಬೈಲ್ ನಂಬರ್ನಿಂದ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಮಾಡಿ, ತಾನು ಸೀನಿಯರ್ ಸಿಟಿಜನ್ ಕಾರ್ಡ್ ದಾಖಲೆಗಳನ್ನು ವೆರಿಫಿಕೇಶನ್ ಮಾಡಲು ಕರೆ ಮಾಡಿರುವುದಾಗಿ ನಂಬಿಸಿದ್ದಾನೆ. ವಂಚಕನ ಮಾತುಗಳನ್ನು ನಂಬಿದ ಹಿರಿಯ ನಾಗರಿಕರು ಆತನಿಗೆ ತಮ್ಮ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್ ನಂಬರ್ ಹಾಗೂ ಸಿವಿವಿ (CVV) ಸಂಖ್ಯೆಯನ್ನು ನೀಡಿದ್ದಾರೆ.
ವಿವರಗಳನ್ನು ಪಡೆದುಕೊಂಡ ಕಳ್ಳರು, ಹಿರಿಯ ನಾಗರಿಕರ ಗಮನಕ್ಕೆ ಬಾರದಂತೆ ಆನ್ಲೈನ್ ಮೂಲಕ ಅವರ ಬ್ಯಾಂಕ್ ಖಾತೆಯಿಂದ ಒಟ್ಟು ರೂ. 1,00,000/- ಹಣವನ್ನು ಹ್ಯಾಕ್ ಮಾಡಿ ಮೋಸದಿಂದ ವರ್ಗಾಯಿಸಿಕೊಂಡು ವಂಚನೆ ಎಸಗಿದ್ದಾರೆ. ತಮ್ಮ ಖಾತೆಯಿಂದ ಹಣ ಕಡಿತಗೊಂಡಿರುವುದನ್ನು ಕಂಡು ಆತಂಕಗೊಂಡ ಸಂತ್ರಸ್ತರು, ಸೈಬರ್ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ದೂರು ದಾಖಲಿಸಿದ್ದಾರೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಅಪರಿಚಿತರೊಂದಿಗೆ ಯಾವುದೇ ಕಾರಣಕ್ಕೂ ಎಟಿಎಂ ಕಾರ್ಡ್ ವಿವರಗಳು, ಒಟಿಪಿ (OTP) ಅಥವಾ ಪಿನ್ ನಂಬರ್ಗಳನ್ನು ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.








