ನವದೆಹಲಿ: ನಿರ್ಬಂಧ ವಿಧಿಸಿದ್ದರೂ ಜಂತರ್ ಮಂತರ್ಗೆ ನುಗ್ಗಿ ಪ್ರತಿಭಟನೆ ನಡೆಸಿದ ಸಿಜೆಪಿ ವಕ್ತರರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ರಾಷ್ಟ್ರಧ್ವಜವನ್ನು ಹಿಡಿದು ಸೌರವ್ ದಾಸ್, ಅಶುತೋಷ್ ರಾಂಕಾ ಇತರರು ಜಂತರ್ ಮಂತರ್ಗೆ ನುಗ್ಗಿದ್ದರು. ಗೋಡೆ ಹಾರಿ ನುಗ್ಗಿದ್ದ ಇವರು ರಸ್ತೆಯಲ್ಲಿ ತ್ರಿವರ್ಣ ಧಜ್ವ ಹಾರಿಸಿ ಘೋಷಣೆ ಕೂಗಿದ್ದಾರೆ. ಸಿಜೆಪಿ ಕಾರ್ಯಕರ್ತರು ನುಗ್ಗಿದ ಕೂಡಲೇ ಅಲ್ಲಿದ್ದ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ ಬೆಳಗ್ಗೆ ವಿಮಾನದ ಒಳಗಡಯೇ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ್ದರು. ಬಿಡುಗಡೆಯ ವೇಳೆ 50 ಸಾವಿರ ರೂ. ಬಾಂಡ್ ಮತ್ತು 1 ವರ್ಷ ಶಾಂತಿಗೆ ಭಂಗ ತರುವ ಕೆಲಸ ಮಾಡುವುದಿಲ್ಲ ಎಂದು ಷರತ್ತಿಗೆ ಸಹಿ ಹಾಕಿ ಬಿಡುಗಡೆಯಾಗಿದ್ದರು.
ದೆಹಲಿಯಲ್ಲಿ ಪ್ರತಿಭಟನೆ ಹಾಗೂ ಧರಣಿಗಳಿಗೆ ಹೆಸರುವಾಸಿಯಾಗಿದ್ದ ಐತಿಹಾಸಿಕ ಜಂತರ್ ಮಂತರ್ ಸ್ಥಳವನ್ನು ಪ್ರತಿಭಟನಾ ತಾಣಗಳ ಪಟ್ಟಿಯಿಂದ ಅಧಿಕೃತವಾಗಿ ಸೋಮವಾರ ರದ್ದುಗೊಳಿಸಲಾಗಿತ್ತು.ಜಂತರ್ ಮಂತರ್ನಲ್ಲಿ ಯಾವುದೇ ರೀತಿಯ ಧರಣಿ, ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಲು ಅವಕಾಶವಿರುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ದೆಹಲಿ ಪೊಲೀಸ್ ಕಚೇರಿಯು ಅಧಿಕೃತ ಆದೇಶ ಹೊರಡಿಸಿತ್ತು.








