ಮಂಗಳೂರು : “ಭಾರತ್ ಮಾತಾ ಕೀ ಜೈ ಎಂದಿದ್ದಕ್ಕೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕೆ ಬಾಂಡ್ ಕೇಳಿದ್ದಾರೆ” ಎಂಬ ಎಬಿವಿಪಿ (ABVP) ಮತ್ತು ಬಿಜೆಪಿ ನಾಯಕರ ಆರೋಪ ಹಾಗೂ ಆಕ್ಷೇಪಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕಟ್ಟುನಿಟ್ಟಿನ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಖಾಕಿ ತೊಡುವಾಗಲೇ ದೇಶದ ರಕ್ಷಣೆಗಾಗಿ ಪಣ ತೊಡುತ್ತೇವೆ. ಆದರೆ, ದೇಶಪ್ರೇಮ ಹಾಗೂ ‘ಭಾರತ್ ಮಾತಾ ಕೀ ಜೈ’ ಘೋಷಣೆಯನ್ನು ಗುರಾಣಿಯನ್ನಾಗಿ ಹಿಡಿದು ಯಾರು ಕೂಡ ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ದೇಶದ ಪರ ಜೈಕಾರ ಹಾಕುವುದು ಹಾಗೂ ಆ ಮೂಲಕ ತಾವು ಮಾಡಿರುವ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯುವುದರಿಂದ ದೇಶಕ್ಕೆ ಯಾವುದೇ ಗೌರವ ಸಲ್ಲಿಸಿದಂತಾಗುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ. ಪ್ರತಿಭಟನೆ ನಡೆಸುವುದಕ್ಕೆ ನಾವು ಯಾವುದೇ ನಿಷೇಧ ಹೇರಿರಲಿಲ್ಲ. ಬದಲಿಗೆ ಸ್ಥಳದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕೆಲವು ಕಡ್ಡಾಯ ಷರತ್ತುಗಳನ್ನು ವಿಧಿಸಿದ್ದೆವು. ಆದರೆ ಸಂಬಂಧಪಟ್ಟ ವಿದ್ಯಾರ್ಥಿಗಳು ಪ್ರತಿಭಟನೆಗೆ ಪೂರ್ವಾನುಮತಿ ತೆಗೆದುಕೊಂಡಿರಲಿಲ್ಲ. ಅಥವಾ ಪೊಲೀಸರಿಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ನೀಡಿರಲಿಲ್ಲ. ಆದರೂ ಕಾಲೇಜು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಿರಲಿಲ್ಲ ಎಂದು ತಿಳಿಸಿದ್ದಾರೆ.
“ಆದರೆ ಸ್ಥಳೀಯರಲ್ಲದೆ ಹೊರಗಡೆಯಿಂದ ಬಂದ ವ್ಯಕ್ತಿಗಳು ಪ್ರತಿಭಟನೆಗೆ ಇಳಿದಾಗ ಮತ್ತು ಕಾಲೇಜು ಆಡಳಿತ ಮಂಡಳಿಯಿಂದ ಈ ಬಗ್ಗೆ ದೂರು ಬಂದಾಗ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ. ಸ್ಥಳದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರುವ ಆತಂಕವಿದ್ದ ಕಾರಣ ಅಲ್ಲಿದ್ದ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಮುಂದೆಯೂ ಇಂತಹ ಕೃತ್ಯಗಳಲ್ಲಿ ತೊಡಗಬಾರದೆಂದು ಮುನ್ನೆಚ್ಚರಿಕೆಗಾಗಿ ಬಾಂಡ್ ಬರೆದುಕೊಡುವಂತೆ ಕೋರಲಾಗಿತ್ತು. ಆದರೆ ವಿದ್ಯಾರ್ಥಿಗಳ ಮನವಿ ಹಾಗೂ ಅವರ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ಅಡಚಣೆಯಾಗಬಾರದೆಂಬ ಕಾರಣಕ್ಕೆ ಅಂತಿಮವಾಗಿ ಆ ರೀತಿಯ ಯಾವುದೇ ಬಾಂಡ್ ಪಡೆದಿರಲಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.








