ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ದಸರಾದಲ್ಲಿ ಬಲೂನ್ ಮಾರುವ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಕೇಸ್ನಲ್ಲಿ ಕಾಮುಕನ ಅಪರಾಧ ಸಾಬೀತಾಗಿದೆ.
ಮೈಸೂರು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರಾದ ಅನಿಲ್ ಪಿ ವಘಾಢೆರವರು ಕಾರ್ತಿಕ್ನನ್ನು (32) ಅಪರಾಧಿ ಎಂದು ಘೋಷಿಸಿದ್ದು, ನಾಳೆ (ಅ.16) ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.
ಕಳೆದ ವರ್ಷ ದಸರಾ ಸಮಯದಲ್ಲಿ ಈ ಘಟನೆ ನಡೆದಿತ್ತು. ದಸರಾ ಹಿನ್ನೆಲೆಯಲ್ಲಿ ಕುಟುಂಬವೊಂದು ಗುಲ್ಬರ್ಗಾದಿಂದ ಬಲೂನ್ ಮಾರಲು ಮೈಸೂರಿಗೆ ಬಂದಿತ್ತು. ಆ ಕುಟುಂಬ ದಸರಾ ವಸ್ತುಪ್ರದರ್ಶನ ಬಳಿ ಟೆಂಟ್ನಲ್ಲಿ ಮಲಗಿದ್ದಾಗ 9 ವರ್ಷದ ಬಾಲಕಿಯನ್ನ ಕಾರ್ತಿಕ್ ಎಳೆದೊಯ್ದು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಿದ್ದ.
ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಲಾಗಿತ್ತು.








