ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಷಡ್ಯಂತ್ರದ ಹಿಂದೆ ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರ ನೇರ ಕೈವಾಡವಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂಬುದನ್ನು ಉಲ್ಲೇಖಿಸಿ, ಈ ಸ್ಟಿಂಗ್ ಆಪರೇಷನ್ ಜಾಲದಲ್ಲಿ ಅವರು ಸಕ್ರಿಯವಾಗಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ. ಕುಮಾರಸ್ವಾಮಿ, ಗೃಹ ಸಚಿವರ ವಿರುದ್ಧ ಕಟು ಶಬ್ದಗಳಲ್ಲಿ ಕಿಡಿಕಾರಿದರು. “ಗೃಹ ಸಚಿವರೇ, ಅಧಿಕಾರ ಇದೆ ಅಂತ ಏನು ಬೇಕಾದರೂ ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಪಕ್ಷದ ಕಾರ್ಯಕರ್ತರನ್ನು ಅರೆಸ್ಟ್ ಮಾಡುತ್ತೀರಾ? ನಾನೇ ಈಗ ನಿಮ್ಮ ಕಚೇರಿಗೆ ಬರ್ತೀನಿ, ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಿ” ಎಂದು ನೇರ ಸವಾಲು ಎಸೆದರು.
ಮುಂದುವರಿದು ಮಾತನಾಡುತ್ತಾ, “ಕುಮಾರಸ್ವಾಮಿ ಮೇಲೆ ಅನುಮಾನ ಬಂದರೆ ಅರೆಸ್ಟ್ ಮಾಡಿಸುತ್ತೀನಿ ಅಂತೀಯಾ? ಬಾ ಅಖಾಡಕ್ಕೆ ನೋಡೋಣ. ಮುಖ್ಯಮಂತ್ರಿಯವರ ಪಕ್ಕದಲ್ಲೇ ಕುಳಿತಿದ್ದವರ ಮೇಲೆ ಪೊಲೀಸರಿಗೆ ಅನುಮಾನ ಬಂದಿಲ್ಲವೇ? ಸಿಎಂ ಒಬ್ಬರನ್ನು ಟ್ರ್ಯಾಪ್ ಮಾಡಿಸಿದ್ದಾರೆ, ಆದರೆ ಅವರನ್ನು ಬಿಟ್ಟುಬಿಟ್ಟಿದ್ದಾರೆ” ಎಂದು ಸರ್ಕಾರದ ನಡೆಗೆ ತಿರುಗೇಟು ನೀಡಿದರು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ ಎಚ್ಡಿಕೆ, “ನನ್ನ ಮಗನ ಪೋಸ್ಟರ್ ಅಂಟಿಸಿದಾಗ ಎಲ್ಲಿ ಹೋಗಿದ್ರಿ ಪ್ರಿಯಾಂಕ್ ಖರ್ಗೆ ಅವರೇ? ಹೆದರಿಸಿ-ಬೆದರಿಸಿ ಆಡಳಿತ ನಡೆಸುತ್ತೇವೆ ಎಂದರೆ ನಾನು ಅದಕ್ಕೂ ರೆಡಿ. ನಿಮ್ಮ ಕಮಿಷನರ್ ಕಚೇರಿಗೆ ಬರ್ತೀನಿ, ಅರೆಸ್ಟ್ ಮಾಡಲಿ” ಎಂದರು.
“ನಾವೇನು ಎಲೆಕ್ಟ್ರಾನಿಕ್ ಉಪಕರಣಗಳನ್ನು ಜೆ.ಪಿ. ನಗರದ ಮನೆಯಲ್ಲಿ ಇಟ್ಟುಕೊಂಡಿದ್ದೀವಾ? ಅಧಿಕಾರ ಕೊಟ್ಟಾಗ ನ್ಯಾಯಯುತವಾಗಿ ನಡೆದುಕೊಳ್ಳಬೇಕು. ನಿಜವಾಗಿ ಸ್ಟಿಂಗ್ ಮಾಡಿದವನನ್ನು ಯಾಕೆ ಅರೆಸ್ಟ್ ಮಾಡಿಲ್ಲ? ಮತ್ತೊಂದೆಡೆ ಪೊಲೀಸ್ ಅಧಿಕಾರಿಯನ್ನೇ ಕೊಲೆ ಮಾಡುತ್ತೇನೆ ಎಂದ ವ್ಯಕ್ತಿಯನ್ನು ಯಾಕೆ ಬಂಧಿಸಿಲ್ಲ?” ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯ ಕೊನೆಯಲ್ಲಿ ತಮ್ಮ ಹರಿತವಾದ ಪದಬಳಕೆಯ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, “ನಾನು ಎಂದಿಗೂ ಈ ಮಟ್ಟದ ಪದ ಬಳಕೆ ಮಾಡುವವನಲ್ಲ. ಆದರೆ ಅವರ ನಡವಳಿಕೆ ಮತ್ತು ಪದಬಳಕೆ ಕಂಡು ಕೋಪ ಬಂದು ಮಾತನಾಡಿದ್ದೇನೆ. ಆ ಪದಬಳಕೆಗಾಗಿ ನಾಡಿನ ಜನತೆಯಲ್ಲಿ ಕ್ಷಮೆ ಕೋರುತ್ತೇನೆ” ಎಂದು ಹೇಳಿದರು








