ಮಂಗಳೂರು: ಫೇಸ್ಬುಕ್ನಲ್ಲಿ ಬಂದಿದ್ದ ‘XM TV’ ಉಚಿತ ಟಿವಿ ಚಾನೆಲ್ ಜಾಹೀರಾತನ್ನು ನಂಬಿ ಆ್ಯಪ್ ಡೌನ್ಲೋಡ್ ಮಾಡಿಕೊಂಡ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹1,78,191/- ಹಣವನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ದೂರುದಾರರಾದ 44 ವರ್ಷದ ವ್ಯಕ್ತಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಸೈಬರ್ ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಅಕ್ಟೋಬರ್ 15ರಂದು ದೂರುದಾರರು ಮನೆಯಲ್ಲಿ ಫೇಸ್ಬುಕ್ ನೋಡುತ್ತಿದ್ದಾಗ ‘XM TV’ ಎಂಬ ಜಾಹೀರಾತು ಕಾಣಿಸಿಕೊಂಡಿದೆ. ಅದರಲ್ಲಿ ಎಲ್ಲಾ ಟಿವಿ ಚಾನೆಲ್ಗಳು ಉಚಿತವಾಗಿ ಸಿಗಲಿವೆ, ಸದರಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಎಂದು ನಮೂದಿಸಲಾಗಿತ್ತು. ಜಾಹೀರಾತನ್ನು ನಂಬಿ ಅದರ ಮೇಲಿದ್ದ ಲಿಂಕ್ ಮೂಲಕ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರು. ಆದರೆ ಇದು ಅಧಿಕೃತ ಪ್ಲೇ ಸ್ಟೋರ್ ಆ್ಯಪ್ ಆಗಿರದೆ, ಮೊಬೈಲ್ನ ಒಳಗೆ ಮಾರಕವಾದ ಎಪಿಕೆ (APK) ಫೈಲ್ ಅನ್ನು ಇನ್ಸ್ಟಾಲ್ ಮಾಡಿಕೊಂಡಿತ್ತು.
ಅಕ್ಟೋಬರ್ 16: ಕರ್ನಾಟಕ ಬ್ಯಾಂಕ್ ಖಾತೆಯಿಂದ ₹98,000/- ಹಾಗೂ ಯೂನಿಯನ್ ಬ್ಯಾಂಕ್ ಖಾತೆಯಿಂದ ₹30,191/- ಅನಧಿಕೃತವಾಗಿ ಯುಪಿಐ (UPI) ಮೂಲಕ ವರ್ಗಾವಣೆಯಾಗಿದೆ. ಅಕ್ಟೋಬರ್ 17: ಮತ್ತೆ ಕರ್ನಾಟಕ ಬ್ಯಾಂಕ್ ಖಾತೆಯಿಂದ ₹50,000/- ಹಣ ಅಪರಿಚಿತರ ಖಾತೆಗೆ ಡ್ರಾ ಮಾಡಿಕೊಳ್ಳಲಾಗಿದೆ. ಅಕ್ಟೋಬರ್ 18ರಂದು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿ ಸಂಪೂರ್ಣ ಹಣ ಖಾಲಿಯಾಗಿರುವುದು ಸಂತ್ರಸ್ತರಿಗೆ ತಿಳಿದುಬಂದಿದೆ. ಕೂಡಲೇ ಠಾಣೆಗೆ ಬಂದು ಪರಿಶೀಲಿಸಿದಾಗ ಮೊಬೈಲ್ನಲ್ಲಿ ಎಪಿಕೆ (APK) ಫೈಲ್ ಡೌನ್ ಲೋಡ್ ಆಗಿರುವುದೇ ಈ ವಂಚನೆಗೆ ಕಾರಣ ಎಂಬುದು ಗೊತ್ತಾಗಿದೆ. ಸೈಬರ್ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ.








