ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಗ್ರಾಹಕರ ಡೇಟಾ ಸೋರಿಕೆಯಾಗಿದ್ದು, ಡಾರ್ಕ್ ವೆಬ್ನಲ್ಲಿ ಲಭ್ಯವಿದ್ದ ಸುಮಾರು 3.75 ಲಕ್ಷ ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸಿದಾಗ 3,897 ಗ್ರಾಹಕರ ವೈಯಕ್ತಿಕ ಗುರುತಿನ ಮಾಹಿತಿಯುಳ್ಳ ದಾಖಲೆಗಳು ಪತ್ತೆಯಾಗಿವೆ ಎಂದು ಎಸ್ಬಿಐ ತಿಳಿಸಿದೆ. 2026ರ ಅಕ್ಟೋಬರ್ 16ರಂದು ಬ್ಯಾಂಕ್ಗೆ ಥ್ರೆಟ್ ಇಂಟೆಲಿಜೆನ್ಸ್ ಸೇವಾ ಪೂರೈಕೆದಾರರು, ರಕ್ಷಣಾ ಸೈಬರ್ ಏಜೆನ್ಸಿ ಹಾಗೂ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ (CERT-In) ಮೂಲಕ ಗ್ರಾಹಕರ ಡೇಟಾ ಡಾರ್ಕ್ ವೆಬ್ನಲ್ಲಿ ಬಹಿರಂಗವಾಗಿರುವ ಶಂಕೆಯ ಕುರಿತು ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
ಗ್ರಾಹಕರ ಯಾವೆಲ್ಲ ಮಾಹಿತಿ ಸೋರಿಕೆ?
ಸೋರಿಕೆಯಾಗಿರುವ ಮಾಹಿತಿಯಲ್ಲಿ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ಜನ್ಮ ದಿನಾಂಕ, ಹೆಸರು, ಲಿಂಗ, ಇಮೇಲ್ ವಿಳಾಸ, ವಸತಿ ವಿಳಾಸ, ಬ್ಯಾಂಕ್ ಶಾಖೆ ಮತ್ತು ಸಿಐಎಫ್ ಗುರುತಿನ ಸಂಖ್ಯೆಗಳು, ಲೀಡ್ ಐಡಿಗಳು, ಸಾಲ ಮತ್ತು ಇತರ ಸಂಬಂಧಿತ ದಾಖಲೆಗಳ ಮಾಹಿತಿ ಸೇರಿರುವುದಾಗಿ ವರದಿಯಾಗಿದೆ. ಸೋರಿಕೆಯಾಗಿರುವ ಡೇಟಾದ ನೈಜತೆ ಮತ್ತು ಸಂಪೂರ್ಣತೆಯನ್ನು ಪರಿಶೀಲಿಸಲು, ಮಾಹಿತಿ ಸೋರಿಕೆಯ ಮೂಲ ಹಾಗೂ ವ್ಯಾಪ್ತಿಯನ್ನು ಪತ್ತೆಹಚ್ಚಲು ಮತ್ತು ಗ್ರಾಹಕರು ಹಾಗೂ ಬ್ಯಾಂಕ್ಗೆ ಉಂಟಾಗಬಹುದಾದ ಅಪಾಯಗಳನ್ನು ನಿರ್ಧರಿಸಲು ವಿವರವಾದ ತನಿಖೆ ಅಗತ್ಯವಾಗಿದೆ ಎಂದು ಎಸ್ಬಿಐ ತಿಳಿಸಿದೆ.
ಬ್ಯಾಂಕ್ನ ಪ್ರಮುಖ ವ್ಯವಹಾರಗಳ ಮೇಲಿಲ್ಲ ಪರಿಣಾಮ
ಪ್ರಕರಣ ಬೆಳಕಿಗೆ ಬಂದ ತಕ್ಷಣ ಬ್ಯಾಂಕ್ ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಸೈಬರ್ ಭದ್ರತಾ ಘಟನೆಯ ಸ್ವರೂಪ ಮತ್ತು ವ್ಯಾಪ್ತಿಯ ಕುರಿತು ಸಮಗ್ರ ಪರಿಶೀಲನೆ ನಡೆಸಲು CERT-In ಮಾನ್ಯತೆ ಪಡೆದ ಸ್ವತಂತ್ರ ಸೈಬರ್ ಭದ್ರತಾ ಸಂಸ್ಥೆಯನ್ನು ನೇಮಿಸಿದೆ. ಹೀಗಿದ್ದರೂ ಈ ಘಟನೆ ಬ್ಯಾಂಕ್ನ ಪ್ರಮುಖ ವ್ಯವಹಾರ ಚಟುವಟಿಕೆಗಳು, ಆರ್ಥಿಕ ಕಾರ್ಯಕ್ಷಮತೆ ಅಥವಾ ವ್ಯವಹಾರದ ನಿರಂತರತೆಯ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರಿಲ್ಲ ಎಂದು ಎಸ್ಬಿಐ ಸ್ಪಷ್ಟಪಡಿಸಿದೆ.
ಪ್ರಕರಣದ ಕುರಿತು ವಿವರವಾದ ಮೌಲ್ಯಮಾಪನ ನಡೆಯುತ್ತಿದ್ದು, ಅಗತ್ಯವಿರುವ ಪರಿಹಾರಾತ್ಮಕ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಿಯಂತ್ರಣ ನಿಯಮಗಳಿಗೆ ಅನುಗುಣವಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ. ಅಕ್ಟೋಬರ್ 21, 2026ರಂದು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಪ್ರಕಟಣೆಯಲ್ಲಿ, ಸೆಬಿಯ ಲಿಸ್ಟಿಂಗ್ ನಿಯಮಗಳ ಅಡಿಯಲ್ಲಿ ಈ ಮಾಹಿತಿಯನ್ನು ಎಸ್ಬಿಐ ಬಹಿರಂಗಪಡಿಸಿದೆ.








