ಬೆಂಗಳೂರು: ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಗೆ ನೂತನ ಸದಸ್ಯರ ಹೆಸರನ್ನು ಘೋಷಿಸಿ ಬಿಜೆಪಿ ಅಧಿಕೃತ ಆದೇಶ ಹೊರಡಿಸಿದೆ. ಈ ಮಹತ್ವದ ಪಟ್ಟಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಖ್ಯಾತ ಯುವ ಚಿಂತಕಿ ಹಾಗೂ ಲೇಖಕಿ ರಶ್ಮಿ ಸಾಮಂತ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.
ಉಡುಪಿ ಮೂಲದ ರಶ್ಮಿ ಸಾಮಂತ್ ಅವರು ಈ ಹಿಂದೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗಮನ ಸೆಳೆದಿದ್ದರು. ಯುವ ಸಮುದಾಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅವರನ್ನು ಇದೀಗ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯನ್ನಾಗಿ ನೇಮಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ.
ಉಡುಪಿಯವರಾದ ರಶ್ಮಿ ಸಾಮಂತ್ ಅವರು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪೂರೈಸಿ, ಬಳಿಕ ಬ್ರಿಟನ್ನ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದರು. 2021ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಆದರೆ, ನಂತರದ ದಿನಗಳಲ್ಲಿ ಅವರ ವಿರುದ್ಧ ನಡೆದ ಕೆಲವು ವಿವಾದಗಳು ಹಾಗೂ ಆಡಳಿತಾತ್ಮಕ ಒತ್ತಡಗಳಿಂದಾಗಿ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತಮ್ಮ ಈ ಕಹಿ ಅನುಭವ ಹಾಗೂ ಹೋರಾಟದ ಹಾದಿಯನ್ನು ಕುರಿತು ಅವರು ‘ಎ ಹಿಂದೂ ಇನ್ ಆಕ್ಸ್ಫರ್ಡ್’ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ್ದಾರೆ. ಪ್ರಸ್ತುತ ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಹಾಗೂ ರಾಷ್ಟ್ರೀಯ ವಿಚಾರಗಳ ಪರವಾಗಿ ಮುಂಚೂಣಿಯಲ್ಲಿ ನಿಂತು ಧ್ವನಿಯೆತ್ತುತ್ತಿರುವ ಇವರ ಸೇವೆಯನ್ನು ಗುರುತಿಸಿ ಬಿಜೆಪಿ ಹೈಕಮಾಂಡ್ ಈ ಮಹತ್ವದ ಹುದ್ದೆಯನ್ನು ನೀಡಿದೆ.








