ಚಿಕ್ಕಬಳ್ಳಾಪುರ: ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಚಿಂತಾಮಣಿ-ಬೆಂಗಳೂರು ರಸ್ತೆಯ ಪೆರಮಾಚನಹಳ್ಳಿ-ಕೆಂದನಹಳ್ಳಿ ನಡುವೆ ನಡೆದಿದೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ತಂಬಾಲಪಲ್ಲಿ ತಾಲೂಕಿನ ಕಲಿಚೆರ್ಲು ಗ್ರಾಮದ ಅಬ್ದುಲ್ ಇಮ್ರಾನ್ (23) ಮೃತಪಟ್ಟ ಕಾರು ಚಾಲಕ. ಘಟನೆಯಲ್ಲಿ ಬಾಬುಲ್ಲಾ, ಅಕ್ತರ್ ಉನ್ನೀಸಾ, ಗೌಸಿಯಾ, ರಶೀದ್ ಬಾಷಾ ಹಾಗೂ ಮುಜಾಮಿಲ್ ಗಾಯಗೊಂಡಿದ್ದಾರೆ.
ವಿಮಾನ ನಿಲ್ದಾಣಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ:
ಖಾಸಗಿ ಬಸ್ ಮದನಪಲ್ಲಿಯಿಂದ ಬೆಂಗಳೂರಿಗೆ ತೆರಳುತ್ತಿತ್ತು. ಕಾರು ಆಂಧ್ರಪ್ರದೇಶದ ತಂಬಾಲಪಲ್ಲಿಯಿಂದ ಚಾಂದ್ ಪಾಷಾ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಿಡಲು ಬೆಂಗಳೂರಿಗೆ ತೆರಳಿತ್ತು. ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ವಾಪಸ್ ಬರುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಪೆರಮಾಚನಹಳ್ಳಿ-ಕೆಂದನಹಳ್ಳಿ ನಡುವಿನ ರಸ್ತೆಯಲ್ಲಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜು:
ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕ ಅಬ್ದುಲ್ ಇಮ್ರಾನ್ ಅವರ ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಘಟನೆಯ ಮಾಹಿತಿ ತಿಳಿದ ತಕ್ಷಣ ಕೈವಾರ ಹೊರಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹೆಚ್.ಕ್ರಾಸ್ನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ
ಮೃತಪಟ್ಟ ಚಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಮೃತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.








