ನವದೆಹಲಿ: ಜಂತರ್ ಮಂತರ್ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಬಿಡುಗಡೆ ಮಾಡಲು ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಅಕ್ಟೋಬರ್ 14 ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಈ ಇಬ್ಬರೂ ನಾಯಕರನ್ನು ಬಿಡುಗಡೆ ಮಾಡುವಂತೆ ಮ್ಯಾಜಿಸ್ಟ್ರೇಟ್ ಸೂಚಿಸಿದ್ದಾರೆ. ಅಧಿಕೃತವಾಗಿ ಪ್ರತಿಭಟನಾ ತಾಣವಲ್ಲ ಎಂದು ಘೋಷಿಸಲಾಗಿದ್ದ ಜಂತರ್ ಮಂತರ್ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ, ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದ್ದಕ್ಕಾಗಿ ಇವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟ ಮರುದಿನವೇ (ಅಕ್ಟೋಬರ್ 13) ಇಬ್ಬರೂ ಬೀಗ ಹಾಕಿದ್ದ ಗೇಟ್ ಹಾರಿ ಅಕ್ರಮವಾಗಿ ಒಳನುಗ್ಗಿ ಇವರಿಬ್ಬರು ರಾಷ್ಟ್ರಧ್ವಜ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 14 ರಂದು ಇವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದಕ್ಕೂ ಮುನ್ನ ಅಕ್ಟೋಬರ್ 11 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಮುನ್ನೆಚ್ಚರಿಕೆ ಬಂಧನಕ್ಕೊಳಗಾಗಿದ್ದಾಗ ಇಬ್ಬರೂ ತಲಾ 50,000 ರೂ. ಮೌಲ್ಯದ ಶಾಂತಿ ಪಾಲನಾ ಬಾಂಡ್ ಸಲ್ಲಿಸಿ, ಒಂದು ವರ್ಷ ಶಾಂತಿ ಕದಡದಂತೆ ಭರವಸೆ ನೀಡಿದ್ದರು. ಆದರೆ ಜಂತರ್ ಮಂತರ್ ಪ್ರವೇಶಿಸುವ ಮೂಲಕ ಬಾಂಡ್ ಷರತ್ತು ಉಲ್ಲಂಘಿಸಿದ್ದರು.








